ಇತ್ತೀಚಿನ ಸುದ್ದಿ
ಏರ್ ಪೋರ್ಟ್ ರನ್ ವೇಯಿಂದ ಹರಿದ ಮಳೆ ನೀರು ನೇರ ಬಡವರ ಮನೆಗೆ!!: ಸ್ಥಳೀಯರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ
01/07/2024, 21:44

ಮಂಗಳೂರು(reporterkarnataka.com): ಮಂಗಳೂರು ಏರ್ಪೋರ್ಟ್ ಆಡಳಿತದ ವಿರುದ್ಧ ಸ್ಥಳೀಯರು ಸೋಮವಾರ ಭಾರಿ ಪ್ರತಿಭಟನೆ ನಡೆಸಿದರು. ವಿಮಾನ ನಿಲ್ದಾಣದ ರನ್ವೇಯಿಂದ ಹರಿದುಹೋಗುವ ನೀರು ಕೆಂಜಾರು ಹಾಗೂ ಸುತ್ತಲಿನ ಪ್ರದೇಶಗಳ ಮನೆಗೆ ನುಗ್ಗಿ ಕೃತಕ ನೆರೆಯ ಆವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಈ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯರು ವಿಮಾನ ನಿಲ್ದಾಣ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಯಾವುದೇ ವಾಹನ ತೆರಳದಂತೆ ತಡೆಯೊಡ್ಡಿದರು. ವಿಷಯ ತಿಳಿಯುತ್ತಿದ್ದಂತೆ ಬಜಪೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಗ್ರಾಮಸ್ಥರ ಮನವೊಲಿಸಿದ ಪೊಲೀಸರು ರಸ್ತೆ ತೆರವುಗೊಳಿಸಿದರು.

ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗುವ ವಿಷಯದಲ್ಲಿ ಏರ್ಪೋರ್ಟ್ ಆಡಳಿತ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಏರ್ಪೋರ್ಟ್ ಸುತ್ತಮುತ್ತಲಿನ ಹಾಗೂ ಕೆಂಜಾರಿನ ಹಲವು ಮನೆಗಳಿಗೆ ನೆರೆ ಭೀತಿ ಸೃಷ್ಟಿಯಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸದೆ ಮಳೆ ನೀರನ್ನು ಅವೈಜ್ಞಾನಿಕವಾಗಿ ಹೊರ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಂಗಳೂರು ಏರ್ ಪೋರ್ಟ್ ಟೇಬಲ್ ಟಾಪ್ ಏರ್ ಪೋರ್ಟ್ ಆಗಿರುವ ಕಾರಣ ಏರ್ ಪೋರ್ಟ್ ಆಡಳಿತ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದರಿಂದ ಕೆಲ ಭಾಗದ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ.