ಇತ್ತೀಚಿನ ಸುದ್ದಿ
ಆಧ್ಯಾತ್ಮ ಎನ್ನುವ ವಿಷಯ ನೀಡಿದರೆ ಮುಂದಿನ ವರ್ಷ ನಾರಾಯಣ ಗುರುಗಳ ಸ್ತಬ್ಧಚಿತ್ರ : ಸಚಿವ ವಿ.ಸುನೀಲ್ ಕುಮಾರ್
28/01/2022, 13:28
ಮಂಗಳೂರು(ReporterKarnataka.com) ಮುಂದಿನ ವರ್ಷ ಗಣರಾಜ್ಯೋತ್ಸವದ ಪರೇಡ್‌ಗೆ ಆಧ್ಯಾತ್ಮ ಎಂಬ ವಿಷಯವನ್ನು ಕೊಟ್ಟರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಕಳುಹಿಸುತ್ತೇವೆ ಎಂದು ದ.ಕ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಮಾಧ್ಯಮದ ಜತೆ ಮಾತನಾಡಿದ ಅವರು,
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇಂದ್ರ ಸರ್ಕಾರದ ಸಮಿತಿ ಅಮೃತಮಹೋತ್ಸವ ಎಂಬ ವಿಷಯದ ಸ್ತಬ್ದಚಿತ್ರ ಕಳುಹಿಸಲು ಹೇಳಿತ್ತು.
ಮುಂದಿನ ವರ್ಷ ಯಾವ ಆಯಾಮದಲ್ಲಿ ಸ್ತಬ್ಥಚಿತ್ರ ಕಳುಹಿಸಬೇಕು ಎಂಬುವುದನ್ನು ಕೇಂದ್ರ ಸರಕಾರದ ಸಮಿತಿ ತೀರ್ಮಾನಿಸುತ್ತದೆ. ಮುಂದಿನ ವರ್ಷ ಪ್ರವಾಸೋದ್ಯಮ, ಅರಣ್ಯ ಹೀಗೆ ವಿಷಯ ನೀಡಿದರೆ ಅದಕ್ಕೆ ತಕ್ಕುದಾದ ಸ್ತಬ್ಧಚಿತ್ರ ಕಳುಹಿಸುತ್ತೇವೆ. ಆಧ್ಯಾತ್ಮ ಎಂಬ ವಿಷಯ ಕೊಟ್ಟರೆ ನಾರಾಯಣ ಗುರು ಸ್ತಬ್ಧಚಿತ್ರ ಕಳುಹಿಸುತ್ತೇವೆ ಎಂದು ಹೇಳಿದರು.
ಈ ಬಾರಿಯ ನಾರಾಯಣ ಗುರು ಟ್ಯಾಬ್ಲೋ ವಿಚಾರವನ್ನು ಕೇರಳ ಸರ್ಕಾರ ರಾಜಕೀಯಗೊಳಿಸಿದೆ. ನಾರಾಯಣ ಗುರುಗಳನ್ನು ಬಿಜೆಪಿ ರಾಜಕಾರಣಕ್ಕೆ ಈ ಹಿಂದೆಯೂ ಬಳಸಿಲ್ಲ.
ಮುಂದೆಯೂ ಬಳಸಲ್ಲ. ಕಾಂಗ್ರೆಸ್ ಇದನ್ನು ರಾಜಕೀಯಗೊಳಿಸಿರಬಹುದು. ಅವರ ಆದರ್ಶಗಳನ್ನು ಸರ್ಕಾರದ ಕಾರ್ಯಕ್ರಮಗಳಲ್ಲಿ ಬಳಸುತ್ತೇವೆ.
ಲೇಡಿಹಿಲ್ ಸರ್ಕಲ್‌ಗೆ ಶೀಘ್ರ ಕಾನೂನಾತ್ಮಕ ನಾಮಕರಣ
ಲೇಡಿಹಿಲ್ ಸರ್ಕಲ್‌ಗೆ ನಾರಾಯಣ ಗುರು ಹೆಸರಿಡಬೇಕು ಎನ್ನುವುದು ಬಿಜೆಪಿಯ ಮಹಾನಗರ ಪಾಲಿಕೆಯ ನಿರ್ಣಯ. ಅದು ನಮ್ಮ ಬದ್ಧತೆ. ಇದರಲ್ಲಿ ರಾಜಕಾರಣ ಇಲ್ಲ. ಕಾನೂನು ಬದ್ದವಾಗಿ ಆಗಬೇಕು ಎನ್ನುವುದು ಶಾಸಕ, ಕಾರ್ಪೋರೇಟರ್‌ಗಳ ಅಭಿಪ್ರಾಯ. ಇದು ಅಂತಿಮ ಹಂತದಲ್ಲಿದೆ. ಇದರ ಮೊದಲೇ ಬೋರ್ಡ್ ಹಾಕಿದರೆ ನಮ್ಮ ಆಕ್ಷೇಪ ಏನಿಲ್ಲ. ಅತ್ಯಂತ ಶೀಘ್ರವಾಗಿ ಅಧಿಕೃತವಾಗಿ ನಾಮಕರಣ ಮಾಡುತ್ತೇವೆ ಎಂದರು.
ಈ ವೇಳೆ ಶಾಸಕರದಾದ ವೇದವ್ಯಾಸ್ ಕಾಮತ್, ಉಮನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ ಮತ್ತಿತರರಿದ್ದರು.