4:43 AM Friday19 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಮಲೆನಾಡಿನಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ: ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್

17/05/2025, 20:35

ಚಿಕ್ಕಮಗಳೂರು(reporterkarnataka.com): ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಮಾತ್ರವಲ್ಲದೆ, ನೆರೆಯ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಮೂರೂ ಜಿಲ್ಲೆಗಳಿಗೆ ಅನ್ವಯವಾಗುವಂತೆ ಕಾಡಾನೆ ನಿಯಂತ್ರಣಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅನುಪಾಲನಾ ವರದಿಯ ಆಧಾರದ ಮೇಲೆ ಸಭೆ ನಡೆಸುವಂತೆ ಕೆಲವು ಶಾಸಕರು ಸಲಹೆ ನೀಡಿದರು. ಆದರೆ, ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರು ಕಾಡಾನೆಗಳ ಉಪಟಳ ನಿಯಂತ್ರಣ ಕುರಿತಂತೆ ಚರ್ಚೆಗೆ ಮನವಿ ಮಾಡಿದರು. ಅಲ್ಲದೆ, ಪ್ರಮುಖವಾಗಿ ಮೂಡಿಗೆರೆ ತಾಲೂಕಿನಲ್ಲಿ 55 ಕಾಡಾನೆಗಳು ನಾಲ್ಕೈದು ಗುಂಪುಗಳಲ್ಲಿ ಓಡಾಡುತ್ತಿವೆ. ಇವುಗಳಿಂದಾಗಿ ರೈತರು, ಕಾಫಿ ಬೆಳೆಗಾರರಿಗೆ ಅಪಾರ ಹಾನಿಯಾಗಿದೆ. ಜನ ವಸತಿ ಪ್ರದೇಶಕ್ಕೂ ಬಂದು ತೊಂದರೆ ನೀಡುತ್ತಿವೆ ಎಂದು ಪ್ರಾಣೇಶ್ ಹೇಳಿದರು.
ಕಾಡಾನೆಗಳ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಡಿಎಫ್‌ಓ ರಮೇಶ್‌ ಬಾಬು, ಚಿಕ್ಕಮಗಳೂರು ವಲಯದಲ್ಲಿ 35, ಕೊಪ್ಪ ವಲಯದಲ್ಲಿ 125, ಭದ್ರಾ ವನ್ಯಜೀವಿ ವಿಭಾಗದಲ್ಲಿ 400 ಕಾಡಾನೆಗಳು ಇವೆ. ಕಳೆದ 2-3 ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮೂಡಿಗೆರೆ ತಾಲೂಕಿಗೆ ಕಾಡಾನೆಗಳ ಹಿಂಡು ಬರುತ್ತಿವೆ.ಪ್ರಸ್ತುತ ನಾಲ್ಕೈದು ಗುಂಪುಗಳು ಓಡಾಡುತ್ತಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲು ಕೆಲವು ಆನೆಗಳಿಗೆ ಕಾಲರ್‌ ಐಡಿ ಹಾಕಲಾಗಿದೆ ಎಂದು ಹೇಳಿದರು.
ಮಧ್ಯೆ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಾಡಾನೆಗಳಿಗೆ ಕಾಡಿನಲ್ಲಿಯೇ ಬೇಕಾಗುವಷ್ಟು ಆಹಾರ ಸಿಕ್ಕಿದರೆ ಅವುಗಳು ಜನ ವಸತಿ ಪ್ರದೇಶಕ್ಕೆ ಬರುವುದಿಲ್ಲ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಕಾಡಿನಿಂದ ಜನವಸತಿ ಪ್ರದೇಶಗಳು ಮತ್ತು ಕೃಷಿ ಜಮೀನುಗಳಿಗೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟುವ ಕೆಲಸ ಇಲಾಖೆಯಿಂದ ಆಗುತ್ತಿದೆ. ಸೆರೆ ಸಿಕ್ಕ ಆನೆಗಳನ್ನು ಬಿಡಾರಕ್ಕೆ ಬಿಡಲು ಭದ್ರಾ ವನ್ಯಜೀವಿ ವಿಭಾಗದಲ್ಲಿ ಆನೆಗಳ ಧಾಮವನ್ನು ನಿರ್ಮಾಣ ಮಾಡು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಈ ವೇಳೆ ಶಾಸಕಿ ನಯನಾ ಮೋಟಮ್ಮ ಮಧ್ಯೆಪ್ರವೇಶಿಸಿ, ಸ್ಥಳೀಯವಾಗಿ ಓಡಾಡುತ್ತಿರುವ ಆನೆಗಳಿಂದ ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ, ಹಾಸನ ಜಿಲ್ಲೆಯಿಂದ ಹಿಂಡು ಹಿಂಡಾಗಿ ಬರುತ್ತಿರುವ ಆನೆಗಳಿಂದ ತೊಂದರೆಯಾಗುತ್ತಿದೆ ಎಂದಾಗ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದನಿಗೂಡಿಸಿ, ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಆನೆಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ಹಣ್ಣಿನ ಮರಗಳು ಹಾಗೂ ಬಿದಿರು ಬೆಳೆಸಬೇಕು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿದಾಗ, ಈ ವರ್ಷ 30 ಸಾವಿರ ಬಿದಿರು ಸಸಿಗಳನ್ನು ನಡೆಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಡಿಎಫ್‌ಓ ರಮೇಶ್‌ ಬಾಬು ಹೇಳಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ಸಚಿವ ಕೆ.ಜೆ. ಜಾರ್ಜ್‌ ಅವರು, ಆನೆಗಳು ನಾಡಿಗೆ ನುಗ್ಗುವುದನ್ನು ನಿಯಂತ್ರಿಸುವ ಸಂಬಂಧ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಾದ ಬಳಿಕ ಅನುಪಾಲನಾ ವರದಿ ಆಧಾರದ ಮೇಲೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಶಾಸಕರಾದ ಕೆ.ಎಸ್‌.ಆನಂದ್‌, ಶ್ರೀನಿವಾಸ್‌, ಎಚ್‌.ಡಿ.ತಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಜಿಪಂ ಮುಕ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಉಪಸ್ಥಿತರಿದ್ದರು.
*ಕೂಸಿನ ಮನೆ, ಕಾರಂಜಿ ಉದ್ಘಾಟನೆ:*
ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಚಿವ ಕೆ.ಜೆ.ಜಾರ್ಜ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜತೆಗೆ, ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಿರ್ಮಿಸಿರುವ ಕೂಸಿನ ಮನೆ ಮತ್ತು ನೂತನ ಕಾರಂಜಿಯನ್ನು ಉದ್ಘಾಟಿಸಿದರು. ಜಿಲ್ಲೆಯ ಶಾಸಕರು, ಜನ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು