ಇತ್ತೀಚಿನ ಸುದ್ದಿ
ಅಭ್ಯರ್ಥಿ ಯಾರೇ ಆಗಲಿ, ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಮುಖ್ಯ: ಪಕ್ಷದ ಮುಖಂಡರಿಗೆ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ
24/01/2024, 22:57

ಮಂಗಳೂರು(reporterkarnataka.com): ಅಭ್ಯರ್ಥಿ ಯಾರೇ ಇರಲಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾಕೀತು ಮಾಡಿದರು.
ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಎಲ್ಲವೂ ಸಾಧ್ಯ. ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲೊಲ್ಲ ಎನ್ನುವ ಭಾವನೆ ಬೇಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ನಾವು ಗೆದ್ದಿಲ್ಲವೇ? ಕೊಡಗಿನಲ್ಲಿ ಗೆದ್ದಿಲ್ಲವೇ? ರಾಮನಗರದಲ್ಲಿ ನಾವು ಗೆದ್ದಿಲ್ಲವೇ? ಕರಾವಳಿಯಲ್ಲಿ ಕೂಡ ಮಂಗಳೂರು ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ನಾವು ಗೆಲ್ಲಲೇ ಬೇಕು. ಅಭ್ಯರ್ಥಿ ಯಾರು ಎನ್ನುವುದು ನಮಗೆ ಮುಖ್ಯವಲ್ಲ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನಮಗೆ ಮುಖ್ಯ ಎಂದು ಅವರು ನುಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ
ಪದ್ಮರಾಜ್ ಆರ್. ಮಿಥುನ್ ರೈ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ್ ಭಂಡಾರಿ, ಕೆ. ಹರೀಶ್ ಕುಮಾರ್, ಮುಖಂಡರಾದ ನಿಕೇತ್ ರಾಜ್ ಮೌರ್ಯ ಬಿ., ಕಣಚೂರು ಮೋನು, ಬಿ ಇಬ್ರಾಹಿಂ, ಶಕುಂತಲಾ ಶೆಟ್ಟಿ, ಅಶೋಕ್ ಕೊಡವೂರ್, ಇನಾಯತ್ ಅಲಿ, ಐವನ್ ಡಿ ಸೋಜ, ಮಮತಾ ಗಟ್ಟಿ, ಗಫೂರ್ ಉಡುಪಿ, ಶಶಿಧರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.