ಇತ್ತೀಚಿನ ಸುದ್ದಿ
ಅಬ್ದುಲ್ಲತೀಫ್ ಕೊಲೆ ಪ್ರಕರಣ: ಡಿಜಿಪಿ, ಮಂಗಳೂರು ಪೊಲೀಸ್ ಕಮಿಷನರ್ ಗೆ ಹೈಕೋರ್ಟ್ ಸಮನ್ಸ್; ಖುದ್ದು ಹಾಜರಾಗಲು ಸೂಚನೆ
22/11/2022, 09:25

ಮಂಗಳೂರು(reporterkarnataka.com): ಉದ್ಯಮಿ ಅಬ್ದುಲ್ಲತೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ,ಮಂಗಳೂರಿನ ಪೊಲೀಸ್ ಕಮಿಷನರ್ ಸೇರಿದಂತೆ ಮೂವರಿಗೆ ಹೈಕೋರ್ಟ್ ಸಮನ್ಸ್ ನೀಡಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಮತ್ತು ನ.30ರಂದು ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ.
ಸುಳ್ಯ ಮೂಲದ ಉದ್ಯಮಿ ಲತೀಫ್ ಕೊಲೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳಿದ್ದು, ಆ ಪೈಕಿ 7 ಮಂದಿಯ ಬಂಧನವಾಗಿದೆ.ಉಳಿದ 3 ಬಂಧನವಾಗಿಲ್ಲ. ಈ ಬಗ್ಗೆ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ನಗರ ಪೊಲೀಸ್ ಆಯುಕ್ತರು, ಮುಲ್ಕಿ ಎಸ್‌ಎಚ್‌ಒ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ನಾಡಿನ
ದಾವೂದ್ ಹಕೀಂ, ಟಿಂಬರ್ ಬಾವ, ಪಕ್ಷಿಕೆರೆಯ ಮುಸ್ತಫಾರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೊಲೆಯಾದ ಅಬ್ದುಲ್ಲತೀಫ್‌ರ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೂವರ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಅವರನ್ನು ಈವರೆಗೂ ಬಂಧಿಸಿಲ್ಲ ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.