ಇತ್ತೀಚಿನ ಸುದ್ದಿ
ಆನಂದ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
11/08/2021, 12:25
ಬೆಂಗಳೂರು(reporterkarnataka.com): ತನಗೆ ನೀಡಿದ ಖಾತೆಯಿಂದ ಅಸಮಾಧಾನಗೊಂದ ಸಚಿವ ಆನಂದ್ ಸಿಂಗ್ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಖಾತೆ ಹಂಚಿಕೆ ಬಳಿಕ ಸಂಪುಟದಲ್ಲಿ ತಕ್ಕ ಮಟ್ಟಿಗೆ ಅಸಮಾಧಾನ ಭುಗಿಲೆದ್ದಿದ್ದು, ಎಂ.ಟಿ. ಬಿ. ನಾಗರಾಜ್, ಆನಂದ ಸಿಂಗ್ ಸೇರಿದಂತೆ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆನಂದ್ ಸಿಂಗ್ ಅವರು ರಾಜೀನಾಮೆಗೂ ಮುಂದಾಗಿದ್ದರು ಎನ್ನಲಾಗಿದೆ. ಆನಂದ್ ಸಿಂಗ್ ಅವರಿಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಬಳ್ಳಾರಿ ಮೂಲದ ಗಣಿ ಉದ್ಯಮಿಯಾದ ಆನಂದ್ ಸಿಂಗ್ ಅವರಿಗೆ ಪರಿಸರ ಖಾತೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗಿದೆ. ಅದೇ ರೀತಿ ಬಹುಕೋಟಿ ಒಡೆಯನಾದ ಎಂಟಿಬಿ ಅವರಿಗೆ ಪೌರಾಡಳಿತ ಖಾತೆ ಬೇಡವಾಗಿದೆ. ಆನಂದ್ ಸಿಂಗ್ ಅವರು ಇಂಧನ ಮತ್ತು ಲೋಕೋಪಯೋಗಿ ಖಾತೆಯ ಮೇಲೆ ಕಣ್ಣಿಟ್ಟಿದ್ದರು.ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ನೀಡಿದ ಇಂಧನ ಖಾತೆಯ ಮೇಲೆ ಆನಂದ್ ಸಿಂಗ್ ಈಗ ದೃಷ್ಟಿ ಹಾಯಿಸಿದ್ದಾರೆ. ನೂತನವಾಗಿ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ, ಸುನಿಲ್ ಕುಮಾರ್ ಗೆ ಇಂಧನ ನೀಡಿರುವ ಬಗ್ಗೆ ಹಲವು ಮಂದಿ ಹಿರಿಯ ಸಚಿವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಆನಂದ ಸಿಂಗ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನಿರಾಕರಿಸಿದ್ದಾರೆ. ಆನಂದ್ ಸಿಂಗ್ ತನ್ನ ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.