ಇತ್ತೀಚಿನ ಸುದ್ದಿ
ಬೆಂಗಳೂರಿನ ತ್ಯಾಜ್ಯ ನೀರು ನಿರ್ವಹಣೆಗೆ ‘ಸ್ವಿಸ್’ ಟಚ್: ಸ್ವಿಟ್ಜರ್ಲೆಂಡ್ ನವೋದ್ಯಮಗಳಿಂದ ತಂತ್ರಜ್ಞಾನ ಹೂಡಿಕೆಗೆ ಒಲವು
15/12/2025, 22:35
•ಸ್ವಿಸ್ನೆಕ್ಸ್ (Swissnex) ಸಿಇಒ ಡಾ. ಏಂಜೆಲಾ ಹೊನೆಗ್ಗರ್ ಜೊತೆ ಮಹತ್ವದ ಸಭೆ
•ಜಾಗತಿಕ ಮಟ್ಟದ ತಂತ್ರಜ್ಞಾನ ಅಳವಡಿಕೆಗೆ ಮುನ್ನುಡಿ
•ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ಹೊಸ ಆವಿಷ್ಕಾರಗಳಿಗೆ ಜಲಮಂಡಳಿ ಸಾಥ್
ಬೆಂಗಳೂರು(reporterkarnataka.com): ಬೆಂಗಳೂರು ನಗರದ ನೀರು ಸರಬರಾಜು ಮತ್ತು ತ್ಯಾಜ್ಯ ನೀರು ನಿರ್ವಹಣಾ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಶ ಸಿಗುವ ಕಾಲ ಸನ್ನಿಹಿತವಾಗಿದೆ. ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುವ ಸ್ವಿಟ್ಜರ್ಲೆಂಡ್ನ ನವೋದ್ಯಮಗಳು (Startups), ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ (Pilot Basis) ತಂತ್ರಜ್ಞಾನ ಹೂಡಿಕೆ ಮಾಡಲು ಒಲವು ತೋರಿವೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.




ಇಂದು ಸ್ವಿಸ್ನೆಕ್ಸ್ ಇಂಡಿಯಾದ ಸಿಇಒ ಹಾಗೂ ಕೌನ್ಸ್ಲ್ ಜೆನೆರಲ್ ಡಾ. ಏಂಜೆಲಾ ಹೊನೆಗ್ಗರ್ (Dr. Angela Honegger) ಅವರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕುರಿತು ಚರ್ಚಿಸಲಾಯಿತು.
*ನವೋದ್ಯಮಗಳಿಗೆ ಮುಕ್ತ ಅವಕಾಶ:*
ಸಭೆಯ ನಂತರ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್, ” ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಲಮಂಡಳಿಯು ಹೊಸ ಆವಿಷ್ಕಾರಗಳಿಗೆ ಸದಾ ತೆರೆದುಕೊಂಡಿದೆ. ನವೋದ್ಯಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾವು ಹೊಸ ಯೋಜನೆಯನ್ನು ರೂಪಿಸಿದ್ದೇವೆ. ಇದರನ್ವಯ, ತ್ಯಾಜ್ಯ ನೀರು ನಿರ್ವಹಣೆ ಮತ್ತು ನೀರು ಸರಬರಾಜು ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳನ್ನು ‘ಪೈಲೆಟ್’ ಆಧಾರದಲ್ಲಿ ಅಳವಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಸ್ಟಾರ್ಟಪ್ಗಳಿಗೆ ತಮ್ಮ ತಂತ್ರಜ್ಞಾನದ ಪರಿಕಲ್ಪನೆಗಳನ್ನು (Proof of Concept) ನೈಜ ಪರಿಸರದಲ್ಲಿ ಪರೀಕ್ಷಿಸಲು ಮತ್ತು ಉತ್ತಮಪಡಿಸಲು ಸಾಧ್ಯವಾಗಲಿದೆ,” ಎಂದರು.
*ಜಾಗತಿಕ ತಂತ್ರಜ್ಞಾನದ ಲಾಭ:*
“ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಸ್ವಿಟ್ಜರ್ಲೆಂಡ್ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಅಲ್ಲಿನ ವಿಶ್ವವಿದ್ಯಾಲಯಗಳು ಮತ್ತು ನವೋದ್ಯಮಗಳು ನಮ್ಮ ಎಸ್ಟಿಪಿಗಳಲ್ಲಿ (STPs) ತಂತ್ರಜ್ಞಾನ ಹೂಡಿಕೆ ಮಾಡಲು ಮುಂದೆ ಬಂದಿರುವುದು ಸಂತಸದ ವಿಷಯ. ಇದರಿಂದ ಅತ್ಯುನ್ನತ ಗುಣಮಟ್ಟದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಸಾಧ್ಯವಾಗುವುದಲ್ಲದೆ, ನಮ್ಮ ಮಂಡಳಿಯ ಇಂಜಿನಿಯರ್ಗಳಿಗೆ ಜಾಗತಿಕ ಮಟ್ಟದ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಲಿದೆ,” ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟರು.
*ಸುಸ್ಥಿರ ಯೋಜನೆಗಳಿಗೆ ಸ್ವಿಸ್ ಮೆಚ್ಚುಗೆ:*
ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ಸುಸ್ಥಿರ ನೀರು ನಿರ್ವಹಣಾ ಯೋಜನೆಗಳ ಬಗ್ಗೆ ಸ್ವಿಸ್ನೆಕ್ಸ್ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕಾರ್ಯಾಗಾರಗಳು ಮತ್ತು ಸಭೆಗಳ ಮೂಲಕ ಉಭಯ ದೇಶಗಳ ನಡುವೆ ತಂತ್ರಜ್ಞಾನ ಮತ್ತು ಜ್ಞಾನ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸ್ವಿಸ್ನೆಕ್ಸ್ ಹೆಡ್ ಆಫ್ ಅಕಾಡೆಮಿಕ್ ಎಂಗೇಜ್ಮೆಂಟ್ ಲೀನಾ ರೋಬ್ರಾ (Lina Robra) ಹಾಗೂ ಹೆಡ್ ಆಫ್ ಇನ್ನೋವೇಷನ್ ರಾಹುಲ್ ಕುಲಕ್ಷೇತ್ರ ಉಪಸ್ಥಿತರಿದ್ದರು.












