ಇತ್ತೀಚಿನ ಸುದ್ದಿ
ಮೂವಿಂಗ್ ಬಾರ್? | ಕೆಎಸ್ಸಾರ್ಟಿಸಿ ಬಸ್ಸನ್ನೇ ಬಾರ್ ಮಾಡಿಕೊಂಡ ಯುವಕರು!: ಸೋಷಿಯಲ್ ಮೀಡಿಯಾದಲ್ಲಿ ವೈರಲ್
06/12/2025, 21:00
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರಾಜ್ಯದ ಮೂಲೆ ಮೂಲೆಗೆ ಪ್ರಯಾಣಿಕರನ್ನು ಹೊತ್ತು ಸಾಗುವ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಬಸ್‌ನಲ್ಲಿ ಪ್ರಯಾಣಿಕರು ಅಸಭ್ಯವಾಗಿ ವರ್ತಿಸಬಾರದು ಎನ್ನುವ ನಿಯಮ ಇದೆ. ಆದರೆ ಕೆಲ ಪುಂಡ ಯುವಕರು ಸರ್ಕಾರಿ ಬಸ್ ಅನ್ನೇ ಬಾರ್ ಮಾಡಿಕೊಂಡಿದ್ದಾರೆ.ರಾಜಾರೋಷವಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಸ್ಟೈಲಾಗಿ ಮದ್ಯ ಸೇವಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಎಸ್‌ಆರ್‌ಟಿಸಿ ಬಸ್ ಸೇವೆ ಹಾಗೂ ಗುಣಮಟ್ಟವು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವುದು ಮಾತ್ರವಲ್ಲ, ಇದಕ್ಕೆ ಹತ್ತಾರು ಪ್ರಶಸ್ತಿಗಳು ಸಹ ಮುಡಿಗೇರಿವೆ. ಆದರೆ ಇತ್ತೀಚೆಗೆ ಬಸ್ ಪ್ರಯಾಣಿಕರು ಮಾಡಿರುವ ಈ ಘನಂದಾರಿ ಕೆಲಸವು ತಲೆತಗ್ಗಿಸುವಂತಿವೆ. ಬಸ್ ಪ್ರಯಾಣದ ವೇಳೆ ಯುವಕರು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದುಕೊಂಡು, ಬಾರ್‌ನಲ್ಲಿರುವಂತೆ ಪೆಗ್ ಹಾಕುತ್ತಾ ಮೋಜು ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ. ಇದು ಕೆಎಸ್‌ಆರ್‌ಟಿಸಿ ಸಾರ್ವಜನಿಕ ಸಾರಿಗೆ ಸಂಸ್ಥೆಯೇ ಅಥವಾ ಮೂವಿಂಗ್ ಬಾರ್? ಎಂದು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಬಸ್‌ನಲ್ಲೇ ಮದ್ಯ ಸೇವಿಸಿರುವ ಯುವಕರು ಪ್ರಯಾಣಿಕರಲ್ಲಿ ಭಯ ಹುಟ್ಟಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನೊಳಗೆ ಪ್ರಯಾಣದ ಸಮಯದಲ್ಲಿ ಯುವಕರ ಗುಂಪು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಅವರ ಬಸ್ ಟಿಕೆಟ್ ಫೋಟೋ ಕೂಡ ತೋರಿಸಲಾಗಿದೆ. ಇದು ಮೈಸೂರು-ಕುಶಾಲನಗರ ಮಾರ್ಗದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುವಾಗ ಯುವಕರು ಬಹಿರಂಗವಾಗಿ ಮದ್ಯ ಸೇವಿಸುತ್ತಿರುವುದು ಖಚಿತವಾಗಿದೆ.
ಬಸ್‌ಗಳು ಇರುವುದು ಸುರಕ್ಷಿತ ಸಾರ್ವಜನಿಕ ಸಾರಿಗೆಗಾಗಿ ಹೊರತು, ಅದು ಬಾರ್‌ಗಳು, ಪಬ್‌ಗಳು ಅಥವಾ ಪಾರ್ಟಿ ಸ್ಥಳಗಳಲ್ಲ. ಯುವಕರ ಇಂತಹ ಬೇಜವಾಬ್ದಾರಿ ಮತ್ತು ಅನಾಗರಿಕ ವರ್ತನೆ ಕಾನೂನುಬಾಹಿರ ಮಾತ್ರವಲ್ಲದೆ, ಕಳವಳಕಾರಿ ಕೂಡ. ಕುಟುಂಬಗಳು, ವೃದ್ಧರು ಮತ್ತು ವಿಶೇಷವಾಗಿ ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸುವಾಗ, ಈ ಕುಡುಕ ವ್ಯಕ್ತಿಗಳು ಭಯದ ವಾತಾವರಣವನ್ನು ಸೃಷ್ಟಿಸುತ್ತಾರೆ. ಇಂತಹ ಕೃತ್ಯಗಳಿಗೆ ಕೆಎಸ್‌ಆರ್‌ಟಿಸಿ ಹೇಗೆ ಅನುಮತಿಸುತ್ತದೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಸಾರ್ವಜನಿಕ ಸಾರಿಗೆಯು ಪ್ರತಿಯೊಬ್ಬ ಪ್ರಯಾಣಿಕರಿಂದ ಶಿಸ್ತು, ಗೌರವ ಮತ್ತು ಮೂಲಭೂತ ನಾಗರಿಕ ಪ್ರಜ್ಞೆಯನ್ನು ನಿರೀಕ್ಷಿಸುವ ಸ್ಥಳವಾಗಿದೆ. ಕೆಲವರು ಸರ್ಕಾರಿ ಬಸ್‌ಗಳನ್ನು ವೈಯಕ್ತಿಕ ಪಾರ್ಟಿ ಹಾಲ್‌ಗಳಂತೆ ಪರಿವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರತಿಯೊಬ್ಬ ಪ್ರಯಾಣಿಕರಿಗೂ ಸುರಕ್ಷಿತ, ಗೌರವಯುತ ಮತ್ತು ಆರಾಮದಾಯಕ ಸೇವೆ ಒದಗಿಸಲು ಇಂತಹ ವ್ಯಕ್ತಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಕೃತ್ಯಗಳಿಗೆ ಕೆಎಸ್‌ಆರ್‌ಟಿಸಿ ಅನುಮತಿ ನೀಡಲೇಬಾರದು. ಇಲ್ಲದಿದ್ದರೆ ಯುವಕರೆಲ್ಲ ಮುಂದೆ ರಾಜಾರೋಷವಾಗಿ ಬಸ್‌ಗಳಲ್ಲೇ ಬಾರ್ ತೆರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಸ್‌ಗಳಲ್ಲಿ ಮದ್ಯಪಾನ, ಧೂಮಪಾನ ನಿಷೇಧ ಎಂಬುದನ್ನು ಪ್ರಯಾಣಿಕರಿಗೆ ಮನದಟ್ಟು ಮಾಡಿಸಿ. ಯುವಕರನ್ನು ಪತ್ತೆ ಹಚ್ಚಿ ಕೂಡಲೇ ಕಾನೂನು ಕ್ರಮ ಜರುಗಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.












