ಇತ್ತೀಚಿನ ಸುದ್ದಿ
ಮಂಗಳೂರಲ್ಲಿ ವೃದ್ದ ದಂಪತಿಯ ಡಿಜಿಟಲ್ ಅರೆಸ್ಟ್ ಗೆ ಯತ್ನ: ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಉಳೀತು 84 ಲಕ್ಷ !
05/12/2025, 15:54
ಮಂಗಳೂರು(reporterkarnataka.com): ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಮತ್ತೊಂದು ವಂಚನೆ ಯತ್ನ ಪ್ರಕರಣ ಕಡಲನಗರಿ ಮಂಗಳೂರಿನಿಂದ ವರದಿಯಾಗಿದೆ.
ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ವೃದ್ದ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಗೆ ಯತ್ನಿಸಲಾಗಿದೆ. ಆದರೆ ಬ್ಯಾಂಕ್ ಮ್ಯಾನೇಜರ್ ನ ಸಮಯ ಪ್ರಜ್ಞೆಯಿಂದ ವೃದ್ಧ ದಂಪತಿಗಳ ಒಟ್ಟು 84 ಲಕ್ಷ ರೂಪಾಯಿ ವಂಚಕರ ಪಾಲಾಗುವುದು ತಪ್ಪಿದೆ. ಇದರೊಂದಿಗೆ ಸೈಬರ್ ವಂಚಕರ ಪ್ಲಾನ್ ಪೂರ್ತಿ ಉಲ್ಟಾ ಆಗಿದೆ.
ಮುಲ್ಕಿಯ ದಾಮಸಕಟ್ಟೆ ನಿವಾಸಿಗಳಾದ ಬೆನ್ಡ್ಡಿಕ್ ಪೆರ್ನಾಂಡಿಸ್ (84) ಹಾಗೂ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ (71) ರವರಿಗೆ ಡಿಸೆಂಬರ್ 1 ರಂದು ಯಾರೋ ಅಪರಿಚಿತರು ಉತ್ತರ ಪ್ರದೇಶದ ಸಿಐಡಿ ಪೊಲೀಸ್ ಎಂಬ ಸೊಗಿನಲ್ಲಿ ಮೊಬೈಲ್ ಫೋನ್ ವಾಟ್ಸ್ಆಯಪ್ ಮೂಲಕ ಸಂಪರ್ಕಿಸಿದ್ದರು. ಅವರುಗಳು 6 ಕೋಟಿ ಮೋಸ ಮಾಡಿರುವುದಾಗಿ ಅವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ, ಸೈಬರ್ ಕಳ್ಳರು ಡಿಜಿಟಲ್ ಅರೆಸ್ಟ್ಗೆ ಒಳಪಡಿಸಿದ್ದರು.
ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ವರ್ಗಾಹಿಸಬೇಕೆಂದು ಸೂಚಿಸಿದ ಮೇರೆಗೆ ಇವರು ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು
ವೃದ್ದರು ಬ್ಯಾಂಕಿಗೆ ಹೋಗಿದ್ದರು. ಈ ಸಮಯ ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ರಾಯಸ್ಟನ್ ಅವರು ದೊಡ್ಡ ಮೊತ್ತದ ಹಣವನ್ನು ಏಕೆ ವರ್ಗಾವಣೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ವೃದ್ದ ದಂಪತಿ ಸರಿಯಾದ ಉತ್ತರ ನೀಡಿರಲಿಲ್ಲ.
ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ದ ದಂಪತಿಯ ಮನೆಗೆ ತೆರಳಿ ಅವರ ಮೊಬೈಲ್ ಪರಿಶೀಲಿಸಿದ್ದು, ಈ ಸಮಯ ಅವರು ಡಿಜಿಟಲ್ ಅರೆಸ್ಟ್ಗೆ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ ವರ್ಗಾವಣೆ ಮಾಡದಂತೆ ಸೂಚಿಸಿ, ವೃದ್ದ ದಂಪತಿಗೆ ತಿಳಿವಳಿಕೆ ನೀಡಿ, ವೃದ್ದ ದಂಪತಿಯ ಹಣವನ್ನು ಉಳಿಸಿದ್ದಾರೆ. ಇದರ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯವರು ವಿಚಾರಣೆ ನಡೆಸುತ್ತಿದ್ದಾರೆ.











