8:29 PM Thursday4 - December 2025
ಬ್ರೇಕಿಂಗ್ ನ್ಯೂಸ್
ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ… ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ: ಕುಶಾಲನಗರ ಬಳಿ ರೈಲ್ವೆ ಬ್ಯಾರಿಕೇಡ್ ಮುರಿದ… ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..!

ಇತ್ತೀಚಿನ ಸುದ್ದಿ

ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ ಅಸಿಸ್ಟ್‌’ ಬಳಕೆ

04/12/2025, 20:18

•ಮೊಬಿಲಿಟಿ ಅಸಿಸ್ಟ್‌ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ

•ಎಚ್‌ಸಿಜಿ ಆಸ್ಪತ್ರೆ ಸಂಸ್ಥಾಪಕ ಡಾ. ಬಿ.ಎಸ್. ಅಜಯ್‌ಕುಮಾರ್ ಅವರಿಂದ ಕೊಡುಗೆ

ಬೆಂಗಳೂರು(reporterkarnataka.com): ವಿಶೇಷ ಚೇತನರಿಗೆ ಸುಲಭವಾಗಿ ವಿಮಾನ ಏರಲು ಸಹಕಾರಿಯಾಗಲು “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಭಾರತದಲ್ಲೇ ಮೊದಲ ಬಾರಿಗೆ “ಮೊಬಿಲಿಟಿ ಅಸಿಸ್ಟ್‌” ಸಾಧನವನ್ನು ಪರಿಚಯಿಸಿದೆ.
ಮಕ್ಕಳು ಸೇರಿದಂತೆ ಪ್ರಯಾಣದ ವೇಳೆ ಹೆಚ್ಚಿನ ಸಹಾಯದ ಅಗತ್ಯವಿರುವವರು, ಕಡಿಮೆ ಚಲನಶೀಲತೆ ಹೊಂದಿರುವವರಿಗೆ ಸುರಕ್ಷಿತ, ಸುಗಮವಾಗಿ ವಿಮಾನದ ಬೋರ್ಡಿಂಗ್ ಮಾಡಲು ಮತ್ತು ವಿಮಾನದಿಂದ ಇಳಿಯಲು ಅತ್ಯಾಧುನಿಕವಾಗಿ ಬೆಂಬಲ ನೀಡುವ ವ್ಯವಸ್ಥೆಯಾಗಿ ಇದು ಕಾರ್ಯ ನಿರ್ವಹಿಸಲಿದೆ. ಎಚ್‌ಸಿಜಿ ಸಂಸ್ಥಾಪಕ ಡಾ. ಬಿ.ಎಸ್. ಅಜಯ್‌ಕುಮಾರ್ ಅವರು ತಮ್ಮ ಮಗ ಆದರ್ಶ್ ಅಜಯ್‌ಕುಮಾರ್ ಅವರ ಸ್ಮರಣಾರ್ಥ ಈ ಸಾಧನವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಡಚೆನ್ ಸ್ನಾಯು ಕ್ಷೀಣತೆ ಹೊಂದಿದ್ದ ಹಾಗೂ ವಿದ್ಯುತ್ ವೀಲ್‌ಚೇರ್ ಬಳಸುತ್ತಿದ್ದ ಆದರ್ಶ್, ವಿಮಾನ ನಿಲ್ದಾಣಗಳಲ್ಲಿ ಸೂಕ್ತ ರೀತಿಯಲ್ಲಿ ಇಳಿಯಲು ಹಾಗೂ ತಾನು ತಲುಪಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಒತ್ತಡ ಅನುಭವಿಸಿದ್ದರು. ಇವರ ಈ ವೈಯಕ್ತಿಕ ಅನುಭವವೇ ಇತರರಿಗೆ ನೆರವಾಗಲು ಸ್ಫೂರ್ತಿಯಾಯಿತು. ಇದೀಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರು ಸುಲಭವಾಗಿ ಈ ಅತ್ಯಾಧುನಿಕ ಉಪಕರಣದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆರಳಬಹುದು.
ಮೊಬಿಲಿಟಿ ಅಸಿಸ್ಟ್‌ ಸಾಧನವು ವಿಮಾನದ ಬೋರ್ಡಿಂಗ್, ಡಿಪ್ಲೇನಿಂಗ್ ಅಥವಾ ಟರ್ಮಿನಲ್‌ಗಳ ನಡುವಿನ ಪ್ರಯಾಣದ ಸಮಯದಲ್ಲಿ ವೀಲ್‌ಚೇರ್‌ನಿಂದ ನೇರವಾಗಿ ಮಕ್ಕಳು ಮತ್ತು ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರಿಗೆ ಯಾಂತ್ರಿಕವಾಗಿ ಸಹಾಯ ಮಾಡುತ್ತದೆ. ಈ ಮೂಲಕ ಅತ್ಯುತ್ತಮ ವರ್ಗಾವಣೆಯ ಅನುಭವವನ್ನು ನೀಡುತ್ತದೆ. ಇದು ದೈಹಿಕ ಒತ್ತಡ ಕಡಿಮೆ ಮಾಡುವ ಜೊತೆಗೆ, ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲದೆ, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ. ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರು ಅವರ ಅಗತ್ಯಗಳಿಗೆ ಅನುಗುಣವಾಗಿ ಈ ಸೇವೆಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ವಿಮಾನಯಾನ ಸಂಸ್ಥೆಯ ಸಮನ್ವಯದ ಮೂಲಕ ಈ ಸೇವೆ ಲಭ್ಯವಿರಲಿದೆ.
ಈ ವೇಳೆ ಮಾತನಾಡಿದ ಡಾ. ಅಜಯ್‌ಕುಮಾರ್ ಅವರು, “ ಅತ್ಯಂತ ಸಂತಸದಿಂದ ಈ ಕೊಡುಗೆ ನೀಡುತ್ತಿದ್ದೇನೆ. ನಮ್ಮ ಪ್ರಯಾಣದ ಸಂದರ್ಭದಲ್ಲಿ ಸೂಕ್ತ ಬೆಂಬಲ, ಸೌಲಭ್ಯಗಳಿಲ್ಲದೇ ನನ್ನ ಮಗ ಆದರ್ಶ್ ಅನಾನುಕೂಲತೆ ಅನುಭವಿಸಿದ್ದಾರೆ. ಇದೀಗ ಅವರು ಅದೇ ನೋವನ್ನು ಉದ್ದೇಶವಾಗಿ ಪರಿವರ್ತಿಸಲು ಮುಂದಾಗಿದ್ದು, ಮೊಬಿಲಿಟಿ ಅಸಿಸ್ಟ್‌ ಕೊಡುಗೆಯ ಮೂಲಕ ತನ್ನಂತಹ ಇತರರು ಸುಲಭವಾಗಿ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲಿ ಎಂದು ಆಶಿಸಿದ್ದಾರೆ. ಇದು ಭಾರತದಾದ್ಯಂತ ವಿಮಾನ ನಿಲ್ದಾಣಗಳು ಅಳವಡಿಸಿಕೊಳ್ಳಬಹುದಾದ ಮಾದರಿಯ ಹೆಜ್ಜೆಯಾಗಿದೆ” ಎಂದು ಮಾಹಿತಿ ನೀಡಿದರು.
ಬಿಐಎಎಲ್‌ ಎಂಡಿ ಮತ್ತು ಸಿಇಒ ಹರಿ ಮರಾರ್ ಅವರು ಮಾತನಾಡಿ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಸಮಾನ ಸೌಕರ್ಯ, ಸೌಲಭ್ಯ ನೀಡುವುದು ನಮ್ಮ ಉದ್ದೇಶದ ಮೂಲ ಮಂತ್ರವಾಗಿದೆ. ಮೊಬಿಲಿಟಿ ಅಸಿಸ್ಟ್‌ ಪರಿಚಯದ ಮೂಲಕ ವಿಶೇಷ ಚೇತನರು ಸಹ ಇನ್ನಷ್ಟು ಸುಲಲತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಸಹಕಾರಿಯಾಗಿದೆ. ಈ ಅತ್ಯಧ್ಬುತ ಕೊಡುಗೆ ನೀಡಿದ ಅಜಯ್‌ಕುಮಾರ್ ಅವರ ಕುಟುಂಬಕ್ಕೆ ಕೃತಜ್ಞರಾಗಿದ್ದೇವೆ. ಇದು ನಮ್ಮ ಪ್ರವೇಶ ಸಾಧ್ಯತೆಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಪ್ರಯಾಣಿಕರ ಆರೈಕೆಯಲ್ಲಿ ಹೊಸ ಮಾನದಂಡವನ್ನು ಹೊಂದಿಸಲಿದೆ” ಎಂದು ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿನ ವಿಶಾಲ ಪ್ರವೇಶ ಸಾಧ್ಯತೆಯ ಉಪಕ್ರಮಗಳಲ್ಲಿ ಗೋಚರವಾಗದ ವಿಶೇಷ ಚೈತನ್ಯ ಹೊಂದಿರುವ ಪ್ರಯಾಣಿಕರಿಗಾಗಿ ಸನ್‌ಫ್ಲವರ್ ಲ್ಯಾನ್ಯಾರ್ಡ್ ಪ್ರೋಗ್ರಾಂ ಮತ್ತು ಪ್ರಯಾಣದ ಸಮಯದಲ್ಲಿ ಶಾಂತಿ ಒದಗಿಸುವ, ನಿಯಂತ್ರಿತ ಪರಿಸರದೊಂದಿಗೆ ವಿಭಿನ್ನ ನರ ಸಂವೇದನೆ ಹೊಂದಿರುವ ಪ್ರಯಾಣಿಕರನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಸಂವೇದನಾ ಕೊಠಡಿಗಳು ಸೇರಿವೆ. ತಡೆರಹಿತ ಮತ್ತು ಅಂತರ್ಗತ ಪ್ರಯಾಣ ಮೂಲಸೌಕರ್ಯವನ್ನು ರಚಿಸುವಲ್ಲಿ ವಿಮಾನ ನಿಲ್ದಾಣದ ಪ್ರಯತ್ನಗಳನ್ನು ಗುರುತಿಸಿ, ಪ್ರತಿಷ್ಠಿತ ಎಸಿಐ ಪ್ರವೇಶ ಸಾಧ್ಯತೆ ವರ್ಧನೆ ಮಾನ್ಯತೆಯ 3ನೇ ಹಂತವನ್ನು ಪಡೆದ ಭಾರತದಲ್ಲಿ ಮೊದಲ ವಿಮಾನ ನಿಲ್ದಾಣವಾಗಿದೆ.

ಮೊಬಿಲಿಟಿ ಅಸಿಸ್ಟ್‌ ನನ್ನು ಪರಿಚಯಿಸುವುದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು ಪ್ರಯಾಣಿಕರ ಅನುಭವವನ್ನು ಮುನ್ನಡೆಸುವಲ್ಲಿ ಮತ್ತೊಂದು ಅರ್ಥಪೂರ್ಣ ಹೆಜ್ಜೆ ಇಡುತ್ತಿದೆ. ಇದು ಪರಿಣಾಮಕಾರಿ, ಸಹಾನುಭೂತಿಯುಳ್ಳ, ಸಮಾನ ಮತ್ತು ಎಲ್ಲರೂ ಪ್ರವೇಶಿಸಬಹುದಾದ ಪ್ರಯಾಣ ವಾತಾವರಣವನ್ನು ನಿರ್ಮಿಸುವ ವಿಮಾನ ನಿಲ್ದಾಣದ ಬದ್ಧತೆಯನ್ನು ಮತ್ತಷ್ಟು ಪ್ರತಿಬಿಂಬಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು