10:09 PM Friday14 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ…

ಇತ್ತೀಚಿನ ಸುದ್ದಿ

2024ರ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ: ನವೆಂಬರ್ 30ರಂದು ಬೆಂಗಳೂರಿನಲ್ಲಿ ಪ್ರದಾನ

14/11/2025, 21:54

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು ಇದೇ ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವವನ್ನು ಒಳಗೊಂಡಿರುತ್ತದೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2024 ನೇ ಸಾಲಿನ ಪ್ರಶಸ್ತಿಗೆ ಅರೆಭಾಷೆ ಸಾಹಿತಿ ಹಾಗೂ ನಿಘಂಟು ತಯಾರಕರು ಆಗಿರುವ ಕೆ.ಆರ್. ಗಂಗಾಧರ, ಗ್ರಾಮೀಣ ಪತ್ರಿಕೋದ್ಯಮದಲ್ಲಿ ಕ್ರಾಂತಿ ಮಾಡಿರುವ ಡಾ.ಯು.ಪಿ. ಶಿವಾನಂದ ಹಾಗೂ ಅರೆಭಾಷಿಕರ ಸಂಘಟಕ ದಂಬೆಕೋಡಿ ಆನಂದ ಇವರುಗಳು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಜೊತೆಗೆ ಐನ್ ಮನೆ ಕುರಿತ ಅರೆಭಾಷೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಇದರೊಂದಿಗೆ ಅರೆಭಾಷೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ಅರೆಭಾಷೆ ಅಕಾಡೆಮಿ ಪ್ರಾಯೋಜಿತ ಅರೆಭಾಷೆ ನಾಟಕ ‘ಅಪ್ಪ’ ಪ್ರದರ್ಶನಗೊಳ್ಳಲಿದೆ ಎಂದು ಸದಾನಂದ ಮಾವಜಿ ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರ ಕಿರು ಪರಿಚಯ: ಕೆ.ಆರ್. ಗಂಗಾಧರ: ಅರೆಭಾಷೆ ಸಾಹಿತಿ ಹಾಗೂ ಪೋಷಕರಾಗಿರುವ ಕೆ.ಆರ್. ಗಂಗಾಧರ ಇವರು ಸಳ್ಯ ತಾಲೂಕು ಅರಂತೋಡು ಗ್ರಾಮದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು. ಓರ್ವ ಮಾದರಿ ಶಿಕ್ಷಕರಾಗಿರುವ ಇವರು ಅರೆಭಾಷಿಕ ಸಮುದಾಯದ ಏಕೈಕ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾಗಿದ್ದಾರೆ. ಅರೆಭಾಷೆಯ ಮೇಲೆ ಉತ್ತಮ ಹಿಡಿತ, ಒಲವು, ಪ್ರೀತಿ ಇರುವ ಇವರ ಅರೆಭಾಷೆ ಪದಸಂಪತ್ತು ಅಪಾರ. ಸುಮಾರು ಮೂರು ಸಾವಿರ ಶಬ್ದಗಳನ್ನೊಳಗೊಂಡ ಅರೆಭಾಷೆ ಕನ್ನಡ – ಇಂಗ್ಲೀಷ್ ಶಬ್ದಕೋಶ, ಅರೆಭಾಷೆ ಗಾದೆಗಳು ಮತ್ತು ನುಡಿಗಟ್ಟುಗಳು ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಇದು ಅರೆಭಾಷೆಗೆ ಲಭ್ಯವಿರುವ ಮೊದಲ ನಿಘಂಟು. ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕೆಲಸಮಾಡಿದವರು. 2019ರಲ್ಲಿ ಜರುಗಿದ ಮೊತ್ತಮೊದಲ ಅರೆಭಾಷೆ ಸಾಹಿತ್ಯ ಸಮ್ಮೇಳನ
ಹಾಗೂ 2022ರಲ್ಲಿ ನಡೆದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಪಟ್ಟವನ್ನು ಅಲಂಕರಿಸಿದವರು.
ಸಮಾಜದಲ್ಲಿ ಒಬ್ಬ ಸಾಧಕನಾಗಿ ಗುರುತಿಸಿಕೊಂಡು ಕೆ.ಆರ್.ಜಿ ಎಂದೇ ಪ್ರಸಿದ್ಧರಾಗಿರುವ ಇವರು ಸುಳ್ಯದ ಮೇರು ಸಾಧಕರ ಸಾಧನೆಗಳ ಬಗ್ಗೆ ಸಾಧನಾ ಶೃಂಗ ಎಂಬ ಕೃತಿ ರಚಿಸಿದ್ದಾರೆ. ಅಮರ ಸುಳ್ಯದ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರನ್ನು ಪರಿಚಯಿಸುವ ‘ಅಮರಶ್ರೀ’ ಎಂಬ ಕೃತಿ ಹಾಗೂ ‘ಬೆಳ್ಳಿರೇಖೆ’ ಎಂಬ ಅನುವಾದಿತ ಕಥಾ ಸಂಕಲನವನ್ನು ಇವರು ಪ್ರಕಟಿಸಿದ್ದಾರೆ.
ಶಿಸ್ತಿನ ಸಿಪಾಯಿ ಹಾಗೂ ಒಬ್ಬ ಮಾದರಿ ಶಿಕ್ಷಕರಾಗಿದ್ದ ಇವರು ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು. ಸುಳ್ಯ ಪಯಸ್ವಿನಿ ಜೇಸಿಸ್ನ ಪೂರ್ವಾಧ್ಯಕ್ಷರಾಗಿದ್ದ ಇವರು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಕರ್ನಾಟಕ ರಾಜ್ಯದ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ ಪಡೆದವರು. ಕರ್ನಾಟಕ ರಾಜ್ಯದ ಅತ್ಯುತ್ತಮ ತರಬೇತುದಾರ ಪ್ರಶಸ್ತಿ, ಸುಳ್ಯ ಪಯಸ್ವಿನಿ ಜೇಸಿಸ್ ಕಮಲಪತ್ರ ಪ್ರಶಸ್ತಿ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಸ್ನೇಹ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕೆ.ಆರ್.ಜಿಯವರು ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಮಾಜಿ ನಿರ್ದೇಶಕರು, ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಅಭಿವೃದ್ಧಿ ಸಂಘದ ಮಾಜಿ ನಿರ್ದೇಶಕರು, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.
ಇವರು ಪ್ರತಿಷ್ಠಿತ ಕುರುಂಜಿ ಮನೆತನದ ದಿವಂಗತ ರಾಮಯ್ಯ ಮಾಸ್ತರ್ ಹಾಗೂ ಗಿರಿಜಾ ದಂಪತಿಯ ಸುಪುತ್ರರಾಗಿ ದಿನಾಂಕ 05 ಮಾರ್ಚ್ 1952 ರಂದು ಜನಿಸಿದರು.
ದಂಬೆಕೋಡಿ ಸುಬ್ರಾಯ ಆನಂದ: ಅರೆಭಾಷಿಕರ ಸಂಘಟಕರಾಗಿರುವ ದಂಬೆಕೋಡಿ ಸುಬ್ರಾಯ ಆನಂದ ಸಮುದಾಯದ ಸಂಘಟನೆಗಳ ಪ್ರೇರಕರು ಮತ್ತು ಪೋಷಕರು. ಕಾಫಿ ಬೆಳೆಗಾರ ದಿವಂಗತ ದಂಬೆಕೋಡಿ ಬೋಪಣ್ಣ ಸುಬ್ರಾಯ ಹಾಗೂ ದಿವಂಗತ ದಂಬೆಕೋಡಿ ಸುಬ್ರಾಯ ರಾಮಕ್ಕ ಇವರ ಸುಪುತ್ರರಾಗಿ ದಿನಾಂಕ 24 ಮೇ 1945ರಂದು ಜನಿಸಿದರು.
ಸಿ.ಎ ಪದವೀಧರರಾಗಿರುವ ಆನಂದ ಅವರು ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ (ಕೆ.ಎಸ್.ಎಫ್.ಸಿ) 30 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದವರು. ತಮ್ಮ ಉದ್ಯೋಗದ ನಿಮಿತ್ತ ತಾವು ವಾಸ್ತವ್ಯವಿದ್ದ ಊರುಗಳಲೆಲ್ಲಾ ಅರೆಭಾಷಿಕ ಸಮುದಾಯದ ಸಂಘಟನೆಗಳಲ್ಲಿ ತೊಡಗಿ ಅರೆಭಾಷಿಕರ ಮನದಲ್ಲಿ ಚಿರಸ್ಥಾಯಿ ಆದವರು. ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಕೆ.ಎಸ್.ಎಫ್.ಸಿಯಲ್ಲಿ ವಲಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರು ಅರೆಭಾಷೆ ಸಮುದಾಯ ಸಂಘಟನೆಗೆ ನೀಡಿದ ಕೊಡುಗೆ ಅಪಾರ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿರುವ ಇವರು ಕೆ.ಎಸ್.ಎಫ್.ಸಿ ಹೌಸಿಂಗ್ ಕೋಆಪರೇಟಿವ್ ಸೊಸೈಟಿ (1984-1988)ರಲ್ಲಿ, ಕೊಡಗು ಗೌಡ ಸಮಾಜದ ಒಕ್ಕೂಟಗಳ (2016-2018)ರಲ್ಲಿ ಅಧ್ಯಕ್ಷರಾಗಿದ್ದರು. ಕೊಡಗು ಗೌಡ ಸಮಾಜ, ಮೈಸೂರು (1988-1991)ರಲ್ಲಿ, ಒಕ್ಕಲಿಗರ ಯಾನೆ ಗೌಡ ಸಮಾಜ, ಮಂಗಳೂರು (1992-1998)ರಲ್ಲಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (1999-2004)ರಲ್ಲಿ, ಕೊಡಗು ಗೌಡ ಸಮಾಜದ ಒಕ್ಕೂಟಗಳ (2016-2018)ರಲ್ಲಿ ಅಧ್ಯಕ್ಷರಾಗಿ ಸಮುದಾಯದ ಚಟುವಟಿಕೆಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಕೊಡಗು ಗೌಡ ವಿದ್ಯಾ ಸಂಘ, ಮಡಿಕೇರಿಯ (2007-2011)ರಲ್ಲಿ ಉಪಾಧ್ಯಕ್ಷರಾಗಿದ್ದರು. 2005ರಿಂದ ಕೊಡಗು ಗೌಡ ನಿವೃತ್ತ ಅಧಿಕಾರಿಗಳ ಸಂಘದ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಕೊಡಗು ಗೌಡ ಸಮಾಜ, ಮಡಿಕೇರಿ ಇದರ ನಿರ್ದೇಶಕರಾಗಿದ್ದಾರೆ.
ಡಾ| ಯು.ಪಿ. ಶಿವಾನಂದ: ಗ್ರಾಮೀಣ ಪತ್ರಿಕೋದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿರುವ ಡಾ| ಯು.ಪಿ. ಶಿವಾನಂದ ಇವರು ಕೊಡಗು ಜಿಲ್ಲೆಯ ಚೆಂಬುವಿನ ಊರುಬೈಲು ದಿವಂಗತ ಯು.ಕೆ ಪುಟ್ಟಪ್ಪ ಹಾಗೂ ಯು.ಪಿ. ಪದ್ಮಾವತಿ ಇವರ ಪುತ್ರರಾಗಿ 18 ಫೆಬ್ರವರಿ 1951 ರಂದು ಜನಿಸಿದರು. ಇವರು ವೈದ್ಯಕೀಯ ಪದವೀಧರರಾಗಿದ್ದರೂ ಇವರ ಸಾಮಾಜಿಕ ಸಾಹಸಗಳು ಅನೇಕ. 1985ರಲ್ಲಿ ಪ್ರಥಮವಾಗಿ ಸುಳ್ಯದಲ್ಲಿ ಆರಂಭಿಸಿರುವ ‘ಸುದ್ದಿ ಬಿಡುಗಡೆ’ ಪತ್ರಿಕೆಯು ಇಂದು ಡಿಜಿಟಲ್ ತಂತ್ರಜ್ಞಾನ ಮೂಲಕ ಅಂತಾರಾಷ್ಟ್ರೀಯವಾಗಿ ವ್ಯಾಪಿಸಿದೆ.
ಶಿವಾನಂದರ ಸುದ್ದಿ ಬಿಡುಗಡೆ ಪತ್ರಿಕೆಯು ಅನೇಕ ಅರೆಭಾಷೆ ಲೇಖಕರಿಗೆ ವೇದಿಕೆಯನ್ನು ಒದಗಿಸಿದ್ದು ಹಲವಾರು ಬರಹಗಾರರು ಸಾಹಿತಿಗಳನ್ನು ಹುಟ್ಟುಹಾಕಲು ಕಾರಣವಾಗಿದೆ. ಸುದ್ದಿ ಬಿಡುಗಡೆ ಪತ್ರಿಕೆಯು ಸುಳ್ಯ ಹಾಗೂ ಬೆಳ್ತಂಗಡಿಗಳಿಂದ ವಾರ ಪತ್ರಿಕೆಯಾಗಿ ಮತ್ತು ಪುತ್ತೂರಿನಿಂದ ದಿನಪತ್ರಿಕೆಯಾಗಿ ಪ್ರಕಟವಾಗುತ್ತಿದ್ದು, ಅನೇಕ ಪತ್ರಕರ್ತರನ್ನು ಹುಟ್ಟುಹಾಕಿದೆ ಮತ್ತು ಅನೇಕ ಸ್ಥಳೀಯ ಅರೆಭಾಷಿಕರು ಹಾಗೂ ಇತರರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ.
ಡಾ.ಯು.ಪಿ.ಶಿವಾನಂದರು ಒಬ್ಬ ಪತ್ರಿಕೋದ್ಯಮಿಯಾಗಿ ಗುರುತಿಸಿಕೊಂಡಿರುವಂತೆ ಒಬ್ಬ ನಿರಂತರ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಭ್ರಷ್ಟಚಾರ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದವರು. ಸುದ್ದಿ ಬಿಡುಗಡೆ ಪತ್ರಿಕೆಗಳು ಪ್ರತ್ಯೇಕ ಪ್ರಾದೇಶಿಕ ಕಲ್ಪನೆಯ ಸಮುದಾಯ ಪತ್ರಿಕೆಗಳಾಗಿದ್ದು ಇವು ತಾಲೂಕು ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪತ್ರಿಕೆಗಳು. ಈ ತಾಲೂಕಿನವರು ಪ್ರಪಂಚದ ಎಲ್ಲೇ ಇದ್ದರು ಅವರ ಸಾಧನೆಯ ಸುದ್ದಿಗಳು ಇದರಲ್ಲಿ ಪ್ರಕಟಗೊಳ್ಳುತ್ತದೆ. ಮೂರು ತಾಲೂಕುಗಳಲ್ಲಿಯೂ ಅತೀ ಹೆಚ್ಚು ಪ್ರಸಾರವನ್ನು ಹೊಂದಿರುವ ತಮ್ಮ ಪತ್ರಿಕೆಗಳ ಮೂಲಕ ಅವರು ಕಳಪೆ ರಸ್ತೆಗಳ ಬಗ್ಗೆ ಜಾಗೃತಿ, ಅನಧಿಕೃತ ಶರಾಬು ಅಂಗಡಿಗಳ ವಿರುದ್ಧ ಆಂದೋಲನ, ಬಲತ್ಕಾರದ ಬಂದ್ಗಳ ವಿರುದ್ಧ ಜನಜಾಗೃತಿ, ಪ್ರಾಮಾಣಿಕ ಅಧಿಕಾರಿಗಳಿಗೆ ಗೌರವ, ಲಂಚಕೋರ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಜನಪರ ಹೋರಾಟ ಮುಂತಾದ ಅನೇಕ ಹೋರಾಟಗಳನ್ನು ನಡೆಸಿದವರು.
ಬಳಕೆದಾರರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದು ಸುಳ್ಯದಲ್ಲಿ ಬಳಕೆದಾರರ ವೇದಿಕೆ ಸ್ಥಾಪಿಸಿ, ಅದರ ಸಂಚಾಲಕರಾಗಿ ಜನಜಾಗೃತಿ ಮೂಡಿಸಿದ್ದಾರೆ. ಬಳಕೆದಾರರ ವೇದಿಕೆ ಎಂಬ ಪತ್ರಿಕೆಯನ್ನು ಪ್ರಕಟಿಸಿ ಉಚಿತವಾಗಿ ಹಂಚಿಕೆ ಮಾಡಿದವರು. ಅಹಮದಾಬಾದಿನಲ್ಲಿ ನಡೆದ ಬಳಕೆದಾರ ಸಂಘಗಳ ಒಂದು ತಿಂಗಳ ಕಾರ್ಯಾಗಾರದಲ್ಲಿ ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಇದಲ್ಲದೆ ಬೆಂಗಳೂರು, ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಬಳಕೆದಾರರ ಸಮಾವೇಶಗಳಲ್ಲಿ ಪ್ರಬಂಧ ಮಂಡನೆ ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ. ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಬಗ್ಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪ್ರಬಂಧ ಮಂಡನೆ ವಿಡಿಯೋ ಪ್ರದರ್ಶನ ನಡೆಸಿದ್ದಾರೆ.
ಅವರ ಸಾಧನೆಗಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರಕಾರ ಕೊಡಮಾಡುವ ಪ್ರತಿಷ್ಠಿತ ಮೊಹರೆ ಹಣಮಂತರಾಯ ಪ್ರಶಸ್ತಿ, ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕಾರ, ಪುತ್ತೂರು ಹಾಗೂ ಮಡಂತ್ಯಾರು ಜೇಸಿಸ್ ವತಿಯಿಂದ ಸಾಧನಾ ಶ್ರೀ ಪುರಸ್ಕಾರ, ಅತ್ಯುತ್ತಮ ಗ್ರಾಮೀಣ ಪತ್ರಿಕೆ ಎಂಬ ನೆಲೆಯಲ್ಲಿ ಆಂದೋಲನ ಪ್ರಶಸ್ತಿ, ತುಳುಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಸನ್ಮಾನ, ಸುಳ್ಯ ತಾಲೂಕು ಗೌಡ ಸಮ್ಮೇಳನದಲ್ಲಿ ಗೌರವ ಸನ್ಮಾನ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು