ಇತ್ತೀಚಿನ ಸುದ್ದಿ
ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಪ್ರತಿಭಟನೆ: 20ಕ್ಕೂ ಅಧಿಕ ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿಗಾಹುತಿ
13/11/2025, 21:45
ಬಾಗಲಕೋಟೆ(reporterkarnataka.com): ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ರೈತರು ತಮ್ಮ ಬೇಡಿಕೆ ಆಗ್ರಹಿಸಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ನಿಂತಿದ್ದ ಸುಮಾರು 20 ಕ್ಕೂ ಅಧಿಕ ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಘಟನೆಯ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಘಾತ ವ್ಯಕ್ತಪಡಿಸಿದ್ದಾರೆ.
*ಕುಮಾರಸ್ವಾಮಿ ಆಘಾತ:*
ಮುಧೋಳದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ರಾಜ್ಯ ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ತಿಳಿಗೊಳಿಸಬೇಕು. ಕಬ್ಬು ಬೆಳೆಗಾರರ ಸಂಕಷ್ಟ ಮತ್ತೆ ಸೃಷ್ಟಿಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುದೋಳದ ಸಕ್ಕರೆ ಕಾರ್ಖಾನೆಯ ಯಾರ್ಡ್ʼನಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರುಗಳು ಬೆಂಕಿಗೆ ಆಹುತಿ ಆಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು.










ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ ಆ ಕ್ಷಣಕ್ಕೇನೋ ಅವರ ಮೂಗಿಗೆ ತುಪ್ಪ ಸವರಿದ ಸರಕಾರವು, ಇಡೀ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘೋರ ವೈಫಲ್ಯ ಕಂಡಿತು. ಅದರ ಪರಿಣಾಮವೇ ಮುಧೋಳದಲ್ಲಿ ರೈತರ ತಾಳ್ಮೆಯ ಕಟ್ಟೆಯೊಡೆಯುಂತೆ ಮಾಡಿದೆ ಎಂದು ಸಚಿವರು ದೂರಿದ್ದಾರೆ.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಲಾಭಕೋರ ಧೋರಣೆಯನ್ನು ಸರಕಾರ ಬಿಡಬೇಕು. ರೈತರ ಸಂಕಷ್ಟವನ್ನು ಅಧಿಕಾರದ ಅಮುಲುಗಣ್ಣಿನಿಂದ ನೋಡಬಾರದು. ಹೃದಯ ವೈಶಾಲ್ಯದಿಂದ ಕಾಣುವ ಔದಾರ್ಯ ತೋರಬೇಕು. ಮುಧೋಳದ ರೈತರ ಜತೆ ನಾನೂ ಇದ್ದೇನೆ ಎಂದು ಸಚಿವರು ಕಬ್ಬು ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ.












