ಇತ್ತೀಚಿನ ಸುದ್ದಿ
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
06/11/2025, 22:52
ಬೆಂಗಳೂರು(reporterkarnataka.com): “ರಾಜ್ಯ ಕಾಂಗ್ರೆಸ್ ಸರ್ಕಾರ, ರಾಜ್ಯದ ಜನತೆಗೆ ಬೆಲೆ ಏರಿಕೆ ಹೇರಿ GST ಕಡಿತದ ಲಾಭ ಲಭಿಸದಂತೆ ನೋಡಿಕೊಳ್ಳುತ್ತಿದೆ” ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 55 ಅಗತ್ಯ ವಸ್ತುಗಳ ಬೆಲೆ ಏರಿಸಿ ರಾಜ್ಯದ ಜನತೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ GST ದರ ಕಡಿತಗೊಳಿಸಿ ಎಲ್ಲಾ ವಸ್ತುಗಳ ಬೆಲೆ ಇಳಿಯುವಂತೆ ನೋಡಿಕೊಂಡರೆ, ರಾಜ್ಯದಲ್ಲಿ ಈ ಸರ್ಕಾರ ಆರಂಭದಲ್ಲಿ ಮಾತ್ರ KMF ಉತ್ಪನ್ನಗಳ ಬೆಲೆ ಇಳಿಸಿ ಜನರ ಮೂಗಿಗೆ ತುಪ್ಪ ಸವರೋ ಕೆಲಸ ಮಾಡಿತು. ಬಳಿಕ ಮತ್ತೆ ದುಪ್ಪಟ್ಟು ಬೆಲೆ ಏರಿಸಿ ಜನರ ಸುಲಿಗೆಗೆ ಇಳಿದಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಇದೀಗ ತುಪ್ಪದ ಬೆಲೆಯನ್ನು ₹ 90 ಮತ್ತು ಬೆಣ್ಣೆ ಬೆಲೆಯನ್ನು ₹ 60 ಹೆಚ್ಚಿಸಿದೆ. ಈ ಮೂಲಕ GST ಇಳಿಕೆ ಲಾಭ ಜನರಿಗೆ ಲಭ್ಯವಾಗದಂತೆ ನೋಡಿಕೊಳ್ಳುತ್ತಿದೆ. ಬೆಣ್ಣೆ – ತುಪ್ಪ ಸೇರಿದಂತೆ ಈವರೆಗೆ ಒಟ್ಟು 55 ಅಗತ್ಯ ವಸ್ತುಗಳ ಬೆಲೆ ಏರಿಸಿ ಸಾಮಾನ್ಯರ ಜನಜೀವನದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.
*ಪ್ರಿಯಾಂಕ ಖರ್ಗೆಗೆ ಸಿಎಂ ಆಗೋ ಆತುರ:*
ರಾಜ್ಯ ಸಚಿವ ಪ್ರಿಯಾಂಕ ಖರ್ಗೆಗೆ ಸಿಎಂ ಆಗೋ ಆತುರ. ಹಾಗಾಗಿ ಏನೆಲ್ಲಾ ಮಾತನಾಡುತ್ತಾರೆ. “ಕಾಂಗ್ರೆಸ್ ಹೈ ಕಮಾಂಡ್ ತಮ್ಮ ತಂದೆಯನ್ನಂತೂ ಸಿಎಂ ಮಾಡಲಿಲ್ಲ. ಆರೆಸ್ಸೆಸ್ ಬಗ್ಗೆ ವಿರೋಧ ಧ್ವನಿ ಎತ್ತಿದರೆ ರಾಜ್ಯದಲ್ಲಿ ಈಗ ತಾವೇ ಸಿಎಂ ಆಗಬಹುದು” ಎಂಬ ಆಲೋಚನೆಯಲ್ಲಿ ಹೀಗೆ ಏನೇನೋ ಮಾಡುತ್ತಿರುವಂತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು.
ಆರೆಸ್ಸೆಸ್ ಇಂದು ನಿನ್ನೆಯಿಂದ ಇದ್ದಂಥ ಸಂಘಟನೆಯಲ್ಲ. ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೂ ಸಕ್ರಿಯವಾಗಿದ್ದಂಥ ಒಂದು ಜನಪರ ಮತ್ತು ಶಿಸ್ತುಬದ್ಧ ಸಂಘಟನೆ. ಇಂದಿರಾ ಗಾಂಧಿ ಕಾಲದಲ್ಲೂ ಬ್ಯಾನ್ ಮಾಡಲು ನೋಡಿದರು. ಆದರೆ ಅಸಾಧ್ಯವಾಯಿತು. ಗಾಂಧಿ ಕುಡಿಗಳನ್ನು ಮೆಚ್ಚಿಸಲು ರಾಜ್ಯದಲ್ಲಿ ಆರೆಸ್ಸೆಸ್ ವಿರುದ್ಧ ದ್ವನಿ ಎತ್ತುತ್ತಿದ್ದಾರೆ ಕೆಲ ಕಾಂಗ್ರೆಸ್ ಮುಖಂಡರು ಎಂದು ಜೋಶಿ ಟೀಕಿಸಿದರು.
*ರಾಜ್ಯ ಸರ್ಕಾರ ಜವಾಬ್ದಾರಿ ತೋರಲಿ:*
ಯಾವುದೇ ಒಂದು ಸಂಘಟನೆ ಬ್ಯಾನ್ ಮಾಡಬೇಕು ಎಂದರೆ ಅದಕ್ಕೊಂದು ಆಯೋಗ ರಚನೆ ಮಾಡಬೇಕಾಗುತ್ತದೆ. ಇದು ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದೇ ಏನಿಲ್ಲ. ಆರೆಸ್ಸೆಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.












