ಇತ್ತೀಚಿನ ಸುದ್ದಿ
ಮಂಗಳೂರು ಪರಿಸರದಲ್ಲಿ ಮತ್ತೆ ಶಾಂತಿ ಕೆದುಕುವ ಪ್ರಯತ್ನ: ಸುರತ್ಕಲ್ ಬಳಿ ಇಬ್ಬರಿಗೆ ಚೂರಿ ಇರಿತ
24/10/2025, 11:29
ಮಂಗಳೂರು(reporterKarnataka.com): ಸುರತ್ಕಲ್ ಸಮೀಪದ ಬಾರೊಂದರಲ್ಲಿ ಇಬ್ಬರ ಮೇಲೆ ತಂಡವೊಂದು ಚಾಕುವಿನಿಂದ ಇರಿದ ಘಟನೆ ನಡೆದಿದೆ. ಇದರೊಂದಿಗೆ ಶಾಂತವಾಗಿದ್ದ ಮಂಗಳೂರು ಪರಿಸರದಲ್ಲಿ ಮತ್ತೆ ಶಾಂತಿ ಕೆದಕುವ ಪ್ರಯತ್ನ ನಡೆದಿದೆ.
ಕೃಷ್ಣಾಪುರದ ನಿವಾಸಿಗಳಾದ ನಿಜಾಮ್(23 ) ಹಾಗೂ ಮುರ್ಷಿದ್(18) ಇತರ ಇಬ್ಬರೊಂದಿಗೆ ಬಾರ್‌ಗೆ ತೆರಳಿದ್ದಾಗ ಅಲ್ಲಿಗೆ ಆಗಮಿಸಿ ತಂಡವೊಂದು ನಿಜಾಮ್ ಮತ್ತು ಮುರ್ಷಿದ್ ಅವರಿಗೆ ಚಾಕುವಿನಿಂದ ಇರಿದಿದೆ. ನಿಜಾಮ್ ಹೊಟ್ಟೆಗೆ ಚಾಕು ಹಾಕಿರುವುದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ನಿಜಾಮ್
ಜತೆಗಿದ್ದ ಮುರ್ಷಿದ್ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುರ್ಷಿದ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 307ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ರಾತ್ರಿ ಆರೋಪಿಗಳ ಅಡಗಿದ್ದ ಸ್ಥಳಕ್ಕೆ ತೆರಳಿದರೂ ಅವರು ಆಗಲೇ ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಪೊಲೀಸ್ ಕಮಿಷನರ್ ಆಸ್ಪತ್ರೆ ಭೇಟಿ ನೀಡಿ ತನಿಖೆ ಪರಿಶೀಲಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.












