ಇತ್ತೀಚಿನ ಸುದ್ದಿ
ಜ್ಯುವೆಲ್ಲರಿ ಶಾಪ್ ಚಿನ್ನದ ಸರ ಕಳ್ಳತನ ಪ್ರಕರಣ: ಮಹಾರಾಷ್ಟ್ರದ 3 ಮಂದಿ ಮಹಿಳೆಯರು ಅರೆಸ್ಟ್
22/09/2025, 20:34

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸುಂಟಿಕೊಪ್ಪ ಫ್ಯಾಷನ್ ಜ್ಯುವೆಲ್ಲರಿ ಶಾಪ್ ನಲ್ಲಿ ಸೆ. 14 ರಂದು ಚಿನ್ನಾಭರಣ ಕಳ್ಳತನ ಮಾಡಿದ್ದ ಮಹಾರಾಷ್ಟ್ರ ಮೂಲದ ಮೂವರು ಮಹಿಳೆಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಅಲ್ಪನಾ (37), ಬಬಿತಾ (47) ಮತ್ತು ಪೂಜಾ (29) ಎಂಬುವವರು ಬಂಧಿತ ಆರೂಪಿಗಳಾಗಿದ್ದಾರೆ. ಇವರಿಂದ 22.188 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು 14ರಂದು ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಭೇಟಿ ನೀಡಿ ಅಂಗಡಿಯವರ ಗಮನಕ್ಕೆ ಬಾರದಂತೆ 22 ಗ್ರಾಮ್ ತೂಕದ ಬಂಗಾರದ ಎರಡು ಸರವನ್ನು ಕಳ್ಳತನ ಮಾಡಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕೃತಗೊಂಡು ಕಲಂ 305(ಎ) BNS Act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಉಪವಿಭಾಗದ DSP ಚಂದ್ರಶೇಖರ್ ಪಿ. ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಸುಂಟಿಕೊಪ್ಪ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಮೋಹನ್ ರಾಜು.ಪಿ ಮತ್ತು ಭಾರತಿ ಕೆ.ಹೆಚ್. ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡವು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಈ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ದಿನೇಶ್ ಕುಮಾರ್.ಬಿ.ಪಿ, ರವರು ಶ್ಲಾಘಿಸಿದ್ದಾರೆ.