ಇತ್ತೀಚಿನ ಸುದ್ದಿ
Mysore | ಗಣೇಶ ಚತುರ್ಥಿ: ದಸರಾ ಗಜಪಡೆಗೆ ಅರಮನೆ ಮುಂಭಾಗದಲ್ಲಿ ವಿಶೇಷ ಪೂಜೆ
27/08/2025, 23:31

ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ನೈಜ ಸ್ವರೂಪದ ವಿನಾಯಕನಾದ ಗಜಪಡೆಗೆ ಇಂದು ಅರಮನೆ ಮುಂಭಾಗದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು.
ಪ್ರತಿವರ್ಷ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಆಗಮಿಸುವ ದಸರಾ ಗಜಪಡೆ ಸಾಮಾನ್ಯವಾಗಿ ಗಣೇಶ ಚತುರ್ಥಿಯನ್ನು ಅರಮನೆ ಆವರಣದಲ್ಲೇ ಆಚರಿಸುವುದು ಸಂಪ್ರದಾಯವಾಗಿದೆ. ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಧನಂಜಯ, ಕಾವೇರಿ, ಲಕ್ಷ್ಮೀ, ಭೀಮ, ಏಕಲವ್ಯ, ಮಹೇಂದ್ರ, ಕಂಜನ್, ಪ್ರಶಾಂತ, ಹೇಮಾವತಿ, ಸುಗ್ರೀವ, ರೂಪ, ಗೋಪಿ ಹಾಗೂ ಶ್ರೀಕಂಠ ಸೇರಿದಂತೆ 14 ಆನೆಗಳನ್ನು ಅರಮನೆ ಮುಂಭಾಗದ ಮಾವುತರ ಶೆಡ್ನ ಹಿಂಭಾಗದಲ್ಲಿರುವ ಸ್ಥಳದಲ್ಲಿ ಸಾಲಾಗಿ ನಿಲ್ಲಿಸಿ ಅವುಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಅರ್ಚಕ ಪ್ರಹ್ಲಾದ್ ರಾವ್ ಅವರು 14 ಆನೆಗಳ ಪಾದ ತೊಳೆದು ಅವುಗಳಿಗೆ ಅರಿಶಿಣ, ಕುಂಕುಮ ಇಟ್ಟು ಪೂಜೆ ಮಾಡಿದರು. ನಂತರ ಗಣೇಶನಿಗೆ ಇಷ್ಟವಾದ ಕಡುಬು, ಸಿಹಿತಿಂಡಿಗಳು ಮತ್ತು ಕಬ್ಬನ್ನು ಗಜಪಡೆಗೆ ನೀಡಲಾಯಿತು. ಅರಣ್ಯ ಇಲಾಖೆ, ಅರಮನೆ ಆಡಳಿತ ಮಂಡಳಿ ಸಂಯುಕ್ತವಾಗಿ ಗಜಪಡೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅರಮನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿ ಗಜಪಡೆಗೆ ತಾಂಬೂಲ ನೀಡಿದರು. ನೈಜ ಸ್ವರೂಪದ ವಿನಾಯಕ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು ಎಂದು ಅರ್ಚಕ ಪ್ರಹ್ಲಾದ್ ರಾವ್ ಮಾಹಿತಿ ನೀಡಿದರು.