ಇತ್ತೀಚಿನ ಸುದ್ದಿ
Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ ಪುತ್ರನ ಬಂಧನ
20/07/2025, 20:04

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಆಸ್ತಿಗಾಗಿ ಸ್ನೇಹಿತರೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿದಲ್ಲದೆ, ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಥೆ ಕಟ್ಟಿದ್ದ ಆರೋಪಿ ಮಗನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕೂಡುಮಂಗಳೂರು ಗ್ರಾಮದ ಕೆ. ಎಂ. ಚಂದ್ರಶೇಖರ್ (28) ಎಂಬಾತ ತಂದೆಯನ್ನು ಕೊಂದು ಇದೀಗ ಕಂಬಿ ಹಿಂದೆ ಬಿದ್ದಿರುವ ಆರೋಪಿ ಆಗಿದ್ದಾನೆ.
ಕೂಡುಮಂಗಳೂರು ನಿವಾಸಿ ಆಗಿದ್ದ ಮಂಜಣ್ಣ ಎಂಬುವವರ ಮೃತದೇಹ ದಿನಾಂಕ 16.03.2025 ರಂದು ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಹರಿಯುತ್ತಿರುವ ಕಾವೇರಿ ಹೊಳೆ ದಡದಲ್ಲಿ ಪತ್ತೆ ಆಗಿತ್ತು. ಅವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು.
ಆದರೇ, ಮೃತ ಮಂಜಣ್ಣ ಕೌಟುಂಬಿಕ ಸಮಸ್ಯೆಯಿಂದಾಗಿ ಪತ್ನಿ ಮತ್ತು ಮಕ್ಕಳಿಂದ ಬೇರೆಯಾಗಿ ಒಬ್ಬರೇ ಕೂಡುಮಂಗಳೂರು ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲದೇ ಸುಮಾರು 14 ವರ್ಷಗಳ ಹಿಂದೆ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಿಷಿನ್ ಗೆ ಎಡಗಾಲು ಸಿಲುಕಿ ತುಂಡಾಗಿತ್ತು. ಆದಾಗ್ಯೂ, ನಡೆಯಲು ಕಷ್ಟಸಾಧ್ಯವಾಗಿದ್ದರೂ ಕೂಡ ಮನೆಯಿಂದ ಹಲವು ಕಿ.ಮೀ. ದೂರದಲ್ಲಿರುವ ಚಿಕ್ಕಬೆಟ್ಟಗೇರಿಗೆ ತೆರಳಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆ ಪ್ರಕರಣದ ತನಿಖೆಗಾಗಿ ಸೋಮವಾರಪೇಟೆ ಉಪವಿಭಾಗ ಡಿಎಪಿ ಚಂದ್ರಶೇಖರ್, ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡ ವಿಶೇಷ ತನಿಖಾ ತಂಡ ಮಾಹಿತಿ ಸಂಗ್ರಹಿಸಿ ಮೃತ ಮಂಜಣ್ಣರವರ ಮಗ ಆರೋಪಿ ಚಂದ್ರಶೇಖರ್ ಕೆ.ಎಂ. (28) ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
*ತಂದೆಯ ಆಸ್ತಿಗಾಗಿ ಮಗನಿಂದ ಕೊಲೆ:*
ಮೃತ ಮಂಜಣ್ಣರವರ ಹಣ ಮತ್ತು ಆಸ್ತಿಯ ಸಲುವಾಗಿ ಅವರ ಮಗ ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡುವ ಉದ್ದೇಶದಿಂದ ಮೊದಲೇ ರೂಪಿಸಿದ ಸಂಚಿನಂತೆ ದಿನಾಂಕ 14-03-2025 ರಂದು ಆಲ್ಟೊ ಕಾರಿನಲ್ಲಿ ಕೂಡುಮಂಗಳೂರು ಗ್ರಾಮದಲ್ಲಿನ ಮನೆಯಿಂದ ಮಂಜಣ್ಣರವರನ್ನು ಬಲವಂತದಿಂದ ಎತ್ತಿಕೊಂಡು ಕಾರಿನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಈ ಸಂದರ್ಭ ಮಂಜಣ್ಣ ಕೂಗಿದಾಗ ಚಂದ್ರಶೇಖರ್ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿದ ಮಂಜಣ್ಣ ಸತ್ತಿದ್ದಾರೆ ಎಂದು ಭಾವಿಸಿ, ಚಿಕ್ಕಬೆಟ್ಟಗೇರಿಯಲ್ಲಿ ಕಾವೇರಿ ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.