ಇತ್ತೀಚಿನ ಸುದ್ದಿ
ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು ಹೋದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ
12/05/2025, 22:38

ಉಡುಪಿ(reporterkarnataka.com): ಜೀ ವಾಹಿನಿಯ ಕಾಮಿಡಿ ಕಿಲಾಡಿ ಸೀಸನ್ – 3ರ ವಿಜೇತ, ಚಲನಚಿತ್ರ ನಟ ರಾಕೇಶ್ ಪೂಜಾರಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಹುಟ್ಟೂರು ಉಡುಪಿ ಜಿಲ್ಲೆಯ ಹೂಡೆಯಲ್ಲಿ ಲಕ್ಷಾಂತರ ಅಭಿಮಾನಿಗಳ ಕಣ್ಣೀರ ನಡುವೆ ನಡೆಯಿತು.
ರಾಕೇಶ್ ಪೂಜಾರಿ ಅವರು ನಿನ್ನೆ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಸಿ ಕಾರ್ಕಳದ ಗೆಳೆಯನ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೆಹಂದಿಯಲ್ಲಿ ಗೆಳೆಯರ ಜತೆ ಡ್ಯಾನ್ಸ್ ಮಾಡುತ್ತಿದ್ದಾಗ ಲೋ ಬಿಪಿಗೆ ಒಳಗಾಗಿ ಹೃದಯಾಘಾತಕ್ಕೀಡಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಸುಮಾರು 3 ಗಂಟೆಗೆ ಕೊನೆಯುಸಿರೆಳೆದರು.
32ರ ಹರೆಯದ ರಾಕೇಶ್ ಅವರು ಕಾಮಿಡಿ ಕಿಲಾಡಿಯ ಮೂಲಕ ಕರ್ನಾಟಕದ ಜನರ ಮನ ಗೆದ್ದಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ರಾಕೇಶ್ ಅವರ ಅಂತ್ಯಕ್ರಿಯಲ್ಲಿ ಖ್ಯಾತ ನಟಿ ರಕ್ಷಿತಾ, ನಟರಾದ ಮಾ. ಆನಂದ್, ನಯನಾ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಕಿರುತೆರೆಯ ತಾರೆಯರು ಪಾಲ್ಗೊಂಡಿದ್ದರು.