ಇತ್ತೀಚಿನ ಸುದ್ದಿ
Bangalore | ಪಾಕ್ ಉಗ್ರರ ವಿರುದ್ದ ಕಾರ್ಯಾಚರಣೆ: ಭಾರತೀಯ ಸೇನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
07/05/2025, 13:10

ಬೆಂಗಳೂರು(reporterkarnataka.com):
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಮೊದಲಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೇನೆ ನಡೆಸಿರುವ ಈ ದಾಳಿ ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ ಮಾತ್ರವಲ್ಲ ಈ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ದ ಅವರನ್ನು ಛೂಬಿಡುತ್ತಿದ್ದ ಪಾಕಿಸ್ಥಾನಕ್ಕೂ ನೀಡಿರುವ ಎಚ್ಚರಿಕೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸೇನಾದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ. ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡದೆ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ. ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರೋದ್ದಾತ ಪರಾಕ್ರಮದಿಂದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ, ಸಮಾಧಾನ ಸಿಕ್ಕಿರಬಹುದೆಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆಮ
ಇದು ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನವನ್ನು ನಡೆಸುವ ನೆರೆಯ ಎಲ್ಲ ದೇಶಗಳಿಗೆ ಕೂಡಾ ಇಂದಿನ ಸೇನಾದಾಳಿ ಎಚ್ಚರಿಕೆಯ ಗಂಟೆಯಾಗಿದೆ.
ಉಗ್ರಗಾಮಿಗಳ ನೆಲೆಯನ್ನೇ ಕೇಂದ್ರವಾಗಿಟ್ಟುಕೊಂಡು ಅಮಾಯಕ ಜನರ ಸಾವು-ನೋವು ನಡೆಯದಂತೆ ದಾಳಿ ನಡೆಸಿರುವ ನಮ್ಮ ಸೈನಿಕರ ಕಾರ್ಯಕ್ಷಮತೆ ಮತ್ತು ಪರಿಣತಿಗೆ ನನ್ನದೊಂದು ದೊಡ್ಡ ಸಲಾಮ್.
– ಭಾರತ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ನಮ್ಮ ಪಕ್ಷ ಸಂಪೂರ್ಣ ಬೆಂಬಲಿಸಿದೆ. ನಾನು ಕೂಡಾ ನಮ್ಮ ಸರ್ಕಾರ ಮತ್ತು ರಾಜ್ಯದ ಪರವಾಗಿ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆಮ
ಇದು ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಅಷ್ಟೇ ಎಚ್ಚರದಿಂದ ಇರುವ ಕಾಲ. ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದಿದ್ದಾರೆ.