ಇತ್ತೀಚಿನ ಸುದ್ದಿ
ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ವಾಪಸ್ ಬರುವುದು ಕೇವಲ 60 ಸಾವಿರ ಕೋಟಿ ಮಾತ್ರ: ಸಿಎಂ ಸಿದ್ದರಾಮಯ್ಯ
03/05/2025, 21:41

*ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಶೇ50 ರಷ್ಟು ತೆರಿಗೆ ರಾಜ್ಯಗಳಿಗೆ ವಾಪಾಸ್ ಕೊಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಈಗ ಇವರೇ ಪ್ರಧಾನಿ ಆದಾಗ ರಾಜ್ಯಗಳಿಗೆ ದೊಡ್ಡ ಮಟ್ಟದ ಅನ್ಯಾಯ ಮಾಡುತ್ತಿದ್ದಾರೆ: ಸಿಎಂ*
*ಅನ್ಯಾಯಕ್ಕೆ ಒಳಗಾಗಿರುವ ದಕ್ಷಿಣದ ರಾಜ್ಯಗಳ ಜೊತೆ ಸೇರಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ: ಸಿಎಂ*
*ನಿಮಗೆ ವಾಹನ, ಸಿಬ್ಬಂದಿ ಅಗತ್ಯವಿದ್ದರೆ ಕೊಡ್ತೇವೆ. ಆದರೆ ತೆರಿಗೆ ಸಂಗ್ರಹದ ಗುರಿ ಮುಟ್ಟಲೇಬೇಕು. ಇದರಲ್ಲಿ ರಾಜಿ ಆಗಬಾರದು: ಸಿಎಂ*
ಬೆಂಗಳೂರು(reporterkarnataka.com): ಆರ್ಥಿಕ ಇಲಾಖೆಗೆ ವಾಹನ, ಸಿಬ್ಬಂದಿ ಅಗತ್ಯವಿದ್ದರೆ ಕೊಡ್ತೇವೆ. ಆದರೆ ತೆರಿಗೆ ಸಂಗ್ರಹದ ಗುರಿ ಮುಟ್ಟಲೇಬೇಕು. ಇದರಲ್ಲಿ ರಾಜಿ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಬ್ಯಾಂಕ್ವೆಂಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕ ಇಲಾಖೆ ವತಿಯಿಂದ ಹೊಸ ವಾಹನಗಳಿಗೆ ಚಾಲನೆ ನೀಡಿ, ಅನುಕಂಪ ಆಧಾರಿತ ನೇಮಕಾತಿ ಆದೇಶ ವಿತರಿಸಿ ಮಾತನಾಡಿದರು.
ತೆರಿಗೆ ವಂಚಿಸುವವರನ್ನು ಪತ್ತೆ ಹಚ್ಚಲು, ತೆರಿಗೆ ಸೋರಿಕೆ ತಡೆಯಲು ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಡಲು ಸರ್ಕಾರ ಸಿದ್ದವಿದೆ. ಆದರೆ, ತೆರಿಗೆ ಸಂಗ್ರಹದ ಗುರಿ ಮುಟ್ಟಲೇಬೇಕು. ಇದರಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದರು.
ವೇತನ ಆಯೋಗ ಶಿಫಾರಸ್ಸು ಮಾಡಿದ ವೇತನದಲ್ಲಿ ನಯಾ ಪೈಸೆ ಚೌಕಾಸಿ ಮಾಡದೆ ಅಷ್ಟೂ ವೇತನ ನೀಡಿದ್ದೇವೆ. ಸರ್ಕಾರಿ ನೌಕರರಿಂದಲೂ ಇಷ್ಟೇ ಪ್ರಮಾಣದಲ್ಲಿ ಕರ್ತವ್ಯ ನಿರೀಕ್ಷಿಸುತ್ತೇನೆ. ತೆರಿಗೆ ಸಂಗ್ರಹದಲ್ಲಿ ಗುರಿ ತಲುಪಲೇಬೇಕು ಎಂದು ಅವರು ನುಡಿದರು.
ನಮಗೆ 11495 ಕೋಟಿ ರೂಪಾಯಿ ಹದಿನೈದನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹಣಕಾಸು ಸಚಿವೆ ಘೋಷಣೆ ಮಾಡಿದ್ದ ಹಣದಲ್ಲಿ ನಯಾ ಪೈಸೆಯನ್ನೂ ರಾಜ್ಯಕ್ಕೆ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಗ್ಯಾರಂಟಿಗಳಿಗೆ ಹಣ ತೆಗೆದಿಟ್ಟಿದ್ದೀವಿ. ಜೊತೆಗೆ 83 ಸಾವಿರ ಕೋಟಿಯನ್ನು ಬಂಡವಾಳ ವೆಚ್ಚಕ್ಕೆ ತೆಗೆದಿರಿಸಿದ್ದೀವಿ. ಕಳೆದ ವರ್ಷ ನಾವು 52 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಿದ್ದೆವು. ಈ ವರ್ಷ 31 ಸಾವಿರ ಕೋಟಿ ಹೆಚ್ಚಿನ ಬಂಡವಾಳ ವೆಚ್ಚ ಕೊಟ್ಟಿದ್ದೀವಿ. ಆದರೂ, ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದು ಟೀಕಿಸಿದರು.