ಇತ್ತೀಚಿನ ಸುದ್ದಿ
Karnataka High Court | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ಪ್ರಕರಣ: ಸಿ.ಟಿ. ರವಿಗೆ ಹಿನ್ನಡೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್
02/05/2025, 20:45

ಬೆಂಗಳೂರು(reporterkarnataka.com): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ದೂರು ರದ್ದು ಕೋರಿ ಬಿಜೆಪಿ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.
ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಅವರಿಗೆ ಭಾರೀ ಹಿನ್ನಡೆಯಾಗಿದೆ.
ಇದು ಶಾಸನ ಸಭೆಯ ವಿನಾಯಿತಿಗೆ ಒಳಪಡುವುದಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಸಿ.ಟಿ. ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ವಿಧಾನ ಪರಿಷತ್ನಲ್ಲಿ ಘಟನೆ ನಡೆದಿರುವುದರಿಂದ ರವಿ ಅವರಿಗೆ ಶಾಸಕಾಂಗ ವಿನಾಯಿತಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ದೂರುದಾರರೇ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನಿಸಿದ್ದರು. ಇದೇ ವೇಳೆ ಹೆಬ್ಬಾಳ್ಕರ್ ಪ್ರಕರಣದಲ್ಲಿ ಕಕ್ಷಿದಾರರಾಗಿ ಇರುವುದಾಗಿ ವಕೀಲರು ದೃಢಪಡಿಸಿದ್ದರು. ಈ ಎಲ್ಲಾ ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ, ಸಿ.ಟಿ. ರವಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.