ಇತ್ತೀಚಿನ ಸುದ್ದಿ
Education | ಗುಣಮಟ್ಟದ, ಕೌಶಲ್ಯಾಧಾರಿತ ಶಿಕ್ಷಣ ನೀಡುವುದು ಸರ್ಕಾರದ ಗುರಿ: ಸಚಿವ ಡಾ.ಎಂ.ಸಿ ಸುಧಾಕರ್
12/03/2025, 10:59

ಬೆಂಗಳೂರು(reporterkarnataka.com): ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯಾಧಾರಿತ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಗುರಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ವಿಧಾನ ಪರಿಷತ್ ಅಧಿವೇಶನದಲ್ಲಿ ಸದನದ ಸದಸ್ಯರಾದ ಕಶಾಲಪ್ಪ,, ಭೋಜನಗೌಡ, ಶಶೀಲ್ ನಮೋಶಿ ಮುಂತಾದವರು ಕೊಡಗು ಜಿಲ್ಲೆಯಲ್ಲಿ ರಚನೆಗೊಂಡಿರುವ ವಿಶ್ವವಿದ್ಯಾಲಯಕ್ಕೆ ಕಳೆದ 2 ವರ್ಷಗಳಿಂದ ಸರ್ಕಾರ ಯಾವುದೇ ಅನುದಾನ ನೀಡದೆ ಅದರ ಅವನತಿಗೆ ಕಾರಣವಾಗುತ್ತಿದೆ ಎಂಬುದರ ಕುರಿತು ನಿಯಮ 72 ರಡಿಯಲ್ಲಿ ಕೋರಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಕೊಡಗು ಸೇರಿದಂತೆ ನೂತನವಾಗಿ ಸ್ಥಾಪಿಸಲ್ಪಟ್ಟ 7 ವಿಶ್ವವಿದ್ಯಾಲಯಗಳ ಜೊತೆಗೆ ಹಾಲಿ ಇರುವ ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಪರಾಮರ್ಶಿಸಿ ಸೂಕ್ತ ಶಿಫಾರಸ್ಸು ಮಾಡಲು ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿದ್ದು, ಈ ಬಗ್ಗೆ ಸಭೆ ನಡೆದಿರುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿ.ವಿ ಗಳನ್ನು ವಿಲೀನ ಮಾಡುವುದು, ಹಂತ ಹಂತವಾಗಿ ಖಾಲಿ ಹುದ್ದೆ ಭರ್ತಿ, ಹೆಚ್ಚಿನ ಅನುದಾನದ ಅಗತ್ಯತೆ ಸೇರಿದಂತೆ ವಿ.ವಿ ಗಳ ಬಲವರ್ಧನೆಗೆ ವಿಸ್ತೃತವಾದ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಉಪನ್ಯಾಸಕರ ನೇಮಕ, ನಿವೃತ್ತರ ಪಿಂಚಣಿಗೆ ಅನುದಾನ, ಮುಂತಾದವುಗಳ ಬಗ್ಗೆ ಶೀಘ್ರವಾಗಿ ಗಮನ ಹರಿಸಲಾಗುವುದೆಂದರು.