6:33 PM Tuesday11 - March 2025
ಬ್ರೇಕಿಂಗ್ ನ್ಯೂಸ್
ರೈತರ ಐಪಿ ಸೆಟ್‌ಗಳಿಗೆ ಹೆಚ್ಚುವರಿ 2 ತಾಸು ವಿದ್ಯುತ್‌ ಪೂರೈಕೆ ಬಗ್ಗೆ ಸರಕಾರ… Higher Education | ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸಲು ಆದ್ಯತೆ::ಉನ್ನತ ಶಿಕ್ಷಣ ಸಚಿವ… APMC BILL | ಎಪಿಎಂಸಿ ನಿಯಂತ್ರಣಕ್ಕೆ ಇ-ಫ್ಲಾಟ್ಫಾರಂಗಳು ತಿದ್ದುಪಡಿ ವಿಧೇಯಕ: ವಿಧಾನಸಭೆ ಅನುಮೋದನೆ Power For Farmers | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ… Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ… Govt Hospital | ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬೆಳಿಗ್ಗೆ 9ರಿಂದ ಸಂಜೆ… ತೀರ್ಥಹಳ್ಳಿ: ಮನೆಯಲ್ಲಿಯೇ ಯುವಕ ನೇಣಿಗೆ ಶರಣು ಕಲಾಪ ನಿರ್ವಹಿಸಿದ ಡಾ. ಮಂಜುನಾಥ ಭಂಡಾರಿ: ವಿಧಾನ ಪರಿಷತ್ ಸಭಾಪತಿ ಪೀಠದಲ್ಲಿ ಅಲಂಕಾರ Siddu Budget | ರಾಜ್ಯ ಬಜೆಟ್ 2025-26: ಮುಖ್ಯಾಂಶಗಳು ಇಲ್ಲಿದೆ ಓದಿ.. Tourism | ಕೊಡವ ಹೆರಿಟೇಜ್ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ: ಪ್ರವಾಸೋದ್ಯಮ ಸಚಿವ…

ಇತ್ತೀಚಿನ ಸುದ್ದಿ

ರೈತರ ಐಪಿ ಸೆಟ್‌ಗಳಿಗೆ ಹೆಚ್ಚುವರಿ 2 ತಾಸು ವಿದ್ಯುತ್‌ ಪೂರೈಕೆ ಬಗ್ಗೆ ಸರಕಾರ ಪರಿಶೀಲನೆ

11/03/2025, 18:04

* ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿಧಾನ ಪರಿಷತ್‌ನಲ್ಲಿ ಭರವಸೆ
* ವಿಪ ಶಾಸಕ ದಿನೇಶ ಗೂಳಿಗೌಡ ಪರಿಷತ್ ಕಲಾಪದಲ್ಲಿ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಸಚಿವರಿಂದ ಉತ್ತರ
* ರೈತರಿಗೆ ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ ಫೋನ್‌ ವಿತರಿಸುವಂತೆ ದಿನೇಶ ಗೂಳಿಗೌಡ ಮನವಿ
* ಗೃಹ ಜ್ಯೋತಿ ಹಣವನ್ನು ವಿದ್ಯುತ್‌ ಕಂಪನಿಗಳಿಗೆ ಮುಂಗಡವಾಗಿ ಪಾವತಿಸಿದ್ದಕ್ಕೆ ಅಭಿನಂದನೆ


ಬೆಂಗಳೂರು(reporterkarnataka.com):
ರೈತರ ಐಪಿ ಸೆಟ್‌ಗಳಿಗೆ ಎರಡು ತಾಸು ಹೆಚ್ಚುವರಿ 3 ಫೇಸ್‌ ವಿದ್ಯುತ್‌ ಒದಗಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಭರವಸೆ ಹೇಳಿದರು.
ವಿಧಾನ ಪರಿಷತ್‌ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ದಿನೇಶ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರ ನೀಡಿದರು. ಸದ್ಯ ದಿನಕ್ಕೆ 7 ತಾಸು ವಿದ್ಯುತ್‌ ನೀಡಲು ಅಗತ್ಯವಿರುವಷ್ಟು ವಿದ್ಯುತ್‌ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ. ಆದರೆ, ಹೆಚ್ಚುವರಿ ವಿದ್ಯುತ್‌ ನೀಡಲು ಕೆಲವು ಸಮಸ್ಯೆಗಳಿವೆ. ಕೆಲವೆಡೆ ಸಬ್‌ ಸ್ಟೇಷನ್‌ಗಳಿಗೆ ಅಷ್ಟು ಸಾಮರ್ಥ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತಿಳಿಸುವುದಾಗಿ ಸಚಿವರು ಭರವಸೆ ನೀಡಿದರು.
*ಹೆಚ್ಚುವರಿ ವಿದ್ಯುತ್‌ ಏಕೆ ಬೇಕು..:?*
ರೈತರ ಬೇಡಿಕೆಯ ಬಗ್ಗೆ ಪರಿಷತ್‌ನಲ್ಲಿ ಸಮರ್ಥವಾಗಿ ವಿಷಯ ಮಂಡಿಸಿದ ವಿಪ ಶಾಸಕ ದಿನೇಶ ಗೂಳಿಗೌಡ ಅವರು, ರೈತರಿಗೆ 2 ತಾಸು ಹೆಚ್ಚುವರಿ ವಿದ್ಯುತ್‌ ಏಕೆ ಪೂರೈಸಬೇಕು ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಾರಿಯ ಬೇಸಿಗೆ ಹಂಗಾಮಿನಲ್ಲಿ ರಾಜ್ಯದಲ್ಲಿ 15 ಲಕ್ಷ ಟನ್‌ ಆಹಾರ ಧಾನ್ಯವನ್ನು ಉತ್ಪಾನೆ ಮಾಡಬೇಕು ಎಂದು ಕೃಷಿ ಇಲಾಖೆ ಗುರಿ ಇಟ್ಟುಕೊಂಡಿದೆ. ಈ ಬಾರಿ ಬೇಸಿಗೆ ಹಂಗಾಮಿನಲ್ಲಿ ಐದೂವರೆ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಭತ್ತ, ರಾಗಿ, ಕಬ್ಬು ಮುಂತಾದ ಆಹಾರ ಧಾನ್ಯ ಬೆಳೆದಿದ್ದಾರೆ. ಆದರೆ, ಈ ಬಾರಿ ಉಷ್ಣಾಂಶ ಹೆಚ್ಚಿದೆ. 1901ನೇ ಇಸವಿಯ ನಂತರ ಈ ವರ್ಷ ದಾಖಲೆ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಏರಿಕೆಯಾದಲ್ಲಿ ಬೆಳೆ ರಕ್ಷಣೆಗೆ ಹೆಚ್ಚುವರಿಯಾಗಿ ನೀರು ಪೂರೈಸಬೇಕು. ಅದಕ್ಕೆ ನಿರಂತರ ವಿದ್ಯುತ್‌ ಪೂರೈಕೆ ಬೇಕಾಗಿದೆ. ಅಲ್ಲದೇ, ಒಂದು ಎಕರೆ ಭತ್ತ ಬೆಳೆಯಲು ಐದರಿಂದ ಏಳೂವರೆ ಎಚ್‌ಪಿ ಪಂಪ್‌ಸೆಟ್‌ನಲ್ಲಿ 10 ರಿಂದ 12.30 ತಾಸು ನೀರು ಹಾಯಿಸಬೇಕು. 4 ಎಕರೆ, 3 ಎಕರೆ ಇರುವವರಿಗೆ ದಿನಕ್ಕೆ ಏಳು ಗಂಟೆ ವಿದ್ಯುತ್‌ ನೀಡಿದರೆ ಸಾಕಾಗುವುದಿಲ್ಲ ಎಂದು ವಿವರಿಸಿದರು.
*ಅಭಿನಂದನೆ;*
ರಾಜ್ಯದಲ್ಲಿ ಸದ್ಯ 18,300 ಮೆಗಾವಾಟ್‌ ವಿದ್ಯುತ್‌ ಬೇಡಿಕೆ ಇದ್ದು, ಅದು ಪೂರೈಕೆಯಾಗುತ್ತಿದೆ. ಮುಂದಿನ ದಿನದಲ್ಲಿ 19 ಸಾವಿರ ಮೆಗಾವಾಟ್‌ ಬೇಡಿಕೆ ಬರಬಹುದಾಗಿದೆ ಎಂದು ಸಚಿವರು ವಿವರಿಸಿದರು. ಗ್ರಾಹಕರ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಈಡೇರಿಸುತ್ತಿರುವ ಸಚಿವರಿಗೆ ದಿನೇಶ ಗೂಳಿಗೌಡ ಅವರು ಈ ವೇಳೆ ಧನ್ಯವಾದ ಹೇಳಿದರು. ಮಾತ್ರವಲ್ಲ, ರಾಜ್ಯದ ವಿದ್ಯುತ್‌ ಕಂಪನಿಗಳಿಗೆ ಗೃಹ ಜ್ಯೋತಿ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಲು ಮುಂಗಡವಾಗಿ ಹಣ ಪಾವತಿ ಮಾಡಿದ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಶಾಸಕರಾದ ದಿನೇಶ್ ಅವರು ಅಭಿನಂದನೆ ಸಲ್ಲಿಸಿದರು.

*ಪಂಜಾಬ್, ಯುಪಿಯಿಂದ‌ ವಿದ್ಯುತ್ ಖರೀದಿ:*
ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ವಿದ್ಯುತ್ ವಿನಿಮಯ ಕೇಂದ್ರಗಳಿಂದ ದಿನವಹಿ ಆಧಾರದ ಮೇಲೆ ಪ್ರತಿ ಯೂನಿಟ್ ಗೆ 6.75 ರಿಂದ 6.87. ರೂ.‌ಬೆಲೆಯಲ್ಲಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ದಿನೇಶ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಬೇಡಿಕೆ ಆಧರಿಸಿ ಪಂಜಾಬ್ ನಿಂದ 50ರಿಂದ 531 ಮೆಗಾವಾಟ್ ವರೆಗೆ 2024 ರ ನವೆಂಬರ್ ನಿಂದ ಖರೀದಿಸಲಾಗುತ್ತಿದೆ.
ಉತ್ತರ ಪ್ರದೇಶದಿಂದ ದಿನಕ್ಕೆ 100ರಿಂದ 1200 ಮೆಗಾವಾಟ್ ವರೆಗೆ ವಿದ್ಯುತ್ ನ್ನು ಡಿಸೆಂಬರ್ ನಿಂದ‌ ಖರೀದಿಸಲಾಗುತ್ತಿದ್ದು ಮೇ ಅಂತ್ಯದವರೆಗೆ ಈ ಪ್ರಕ್ರಿಯೆ‌ ಮುಂದುವರೆಯಲಿದೆ ಎಂದು ಸಚಿವರು ತಿಳಿಸಿದರು.
*ಆಧುನಿಕ ಮೊಬೈಲ್‌ ನೀಡಿ;*
ಹಗಲು 4 ತಾಸು, ರಾತ್ರಿ 3 ತಾಸು ಸೇರಿ ಒಟ್ಟು 7 ತಾಸು ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಆದರೆ, ಹಗಲಿನಲ್ಲೇ ನಿರಂತರವಾಗಿ ವಿದ್ಯುತ್‌ ಉತ್ಪಾದನೆ ಮಾಡಬೇಕು ಎಂದು ದಿನೇಶ್ ಗೂಳಿಗೌಡ ಅವರು ವಿಧಾನ ಪರಿಷತ್ ನಲ್ಲಿ ಮನವಿ ಮಾಡಿದರು. ಹಾಗೊಮ್ಮೆ ರಾತ್ರಿಯ ಅವಧಿಯಲ್ಲಿ ವಿದ್ಯುತ್‌ ಪೂರೈಕೆ ಮಾಡುವುದಿದ್ದಲ್ಲಿ 33.5 ಲಕ್ಷ ರೈತರಿಗೆ ಆಧುನಿಕ ತಂತ್ರಜ್ಞಾನ ಇರುವ ಸ್ಮಾರ್ಟ್‌ ಫೋನ್‌ಗಳನ್ನು ರೈತರಿಗೆ ನೀಡಬೇಕು. ಅದರಿಂದ ಅವರು ಮನೆಯಲ್ಲೇ ಕುಳಿತು ಐಪಿ ಸೆಟ್‌ಗಳನ್ನು ಆಪರೇಟ್‌ ಮಾಡಬಹುದು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಕೆ.ಜೆ.ಜಾರ್ಜ್‌ ಅವರು, ರಾಜ್ಯದಲ್ಲಿ ಸದ್ಯ ಪ್ರತಿ ದಿನ 18,300 ಮೆಗಾವಾಟ್‌ ವಿದ್ಯುತ್‌ ಬೇಡಿಕೆ ಇದ್ದು, ಅದು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ 19 ಸಾವಿರ ಮೆಗಾವಾಟ್‌ ಬೇಡಿಕೆ ಬರಬಹುದು ಎಂದು ಅಂದಾಜಿಸಲಾಗಿದೆ. ನಿರಂತರವಾಗಿ 7 ತಾಸು ಪೂರೈಸುವಷ್ಟು ವಿದ್ಯುತ್‌ ನಮ್ಮ ಬಳಿ ಇದೆ. ಆದರೆ, ನಿರಂತರ ವಿದ್ಯುತ್‌ ಪೂರೈಕೆ ಮಾಡದೆ, ಹಗಲು ಹಾಗೂ ರಾತ್ರಿ ಪೂರೈಕೆ ಮಾಡುವಂತೆ ಕೆಲವೆಡೆ ಮನವಿ ಬಂದಿದೆ. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸಲಾಗಿದೆ ಎಂದರು.
*ಒಂದು ವರ್ಷದಲ್ಲಿ ಅಕ್ರಮ ಸಕ್ರಮ ಪೂರ್ಣ:*
ಶೀಘ್ರದಲ್ಲಿ ರಾಜ್ಯದಲ್ಲಿ ನಿರಂತರ ವಿದ್ಯುತ್‌ ನೀಡಲು ಯೋಜನೆ ರೂಪಿಸುತ್ತಿರುವ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಸದನದಲ್ಲಿ ಸುಳಿವು ನೀಡಿದರು. ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಅವರು, ರಾಜ್ಯದಲ್ಲಿ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅದಕ್ಕಾಗಿ 19 ರಿಂದ 20 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ಇನ್ನು ಒಂದು ವರ್ಷದಲ್ಲಿ ರಾಜ್ಯದಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಮುಗಿಯಲಿದೆ.
ಸದ್ಯ ಹಗಲಿಡೀ ವಿದ್ಯುತ್‌ ಪೂರೈಕೆಗೆ ಕೆಲವು ಸಮಸ್ಯೆಗಳಿವೆ. ನಂತರ ಹಗಲಿಡೀ ವಿದ್ಯುತ್‌ ಪೂರೈಕೆ, ಸ್ಮಾರ್ಟ್ ಮೀಟರ್‌ ಅಳವಡಿಕೆ ಬಗ್ಗೆ ಜನಪ್ರತಿನಿಧಿಗಳ ಜತೆ ಚರ್ಚೆ ಮಾಡಲಾಗುವುದು ಎಂದರು.
ಮುಂದೆ ಕುಸುಮ್‌- ಸಿ ಯೋಜನೆಯಲ್ಲಿ ವಿವಿಧ ಗ್ರಾಮಗಳಲ್ಲಿ 3.5ರಿಂದ 4 ಎಕರೆ ಜಮೀನು ಗುರುತಿಸಲಾಗುತ್ತಿದೆ. ಅಲ್ಲಿ ಸೋಲಾರ್‌ ಘಟಕ ಅಳವಡಿಸಿ, ಆ ಘಟಕದಲ್ಲೇ ವಿದ್ಯುತ್‌ ಉತ್ಪಾನೆ ಮಾಡಿ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್‌ ಉತ್ಪಾದನೆ ಮಾಡಲು ಯೋಜಿಸಿದ್ದೇವೆ.
ಕುಸುಮ್‌-ಬಿ ಯೋಜನೆಯಲ್ಲಿ ರೈತರಿಗೆ ಸೋಲಾರ್‌ ಘಟ ನಿರ್ಮಾಣ ಮಾಡಲು ಶೇ. 80 ರಷ್ಟು ಸಬ್ಸಿಡಿ ನೀಡಲು ಅವಕಾಶವೂ ಇದೆ ಎಂದು ಸಚಿವ ಜಾರ್ಜ್‌ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು