9:43 PM Monday24 - February 2025
ಬ್ರೇಕಿಂಗ್ ನ್ಯೂಸ್
Basavanna | ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ… Sub Jail | ಮಂಗಳೂರು ಜೈಲ್ ಒಳಗೆ 2 ಪೊಟ್ಟಣ ಎಸೆತ: ಮಾಜಿ… ಸುಗ್ರಿವಾಜ್ಞೆ ಜಾರಿಯಾದರೂ ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ: ಗೃಹ ಸಚಿವರ ತವರಿನಲ್ಲೇ ಇಬ್ಬರು… ಕಂದಾಯ ಇಲಾಖೆ ಅಧಿಕಾರಿಗಳಿಂದ ಮುಜರಾಯಿ ಇಲಾಖೆಯ ಕೋಟ್ಯಂತರ ಹಣ ಗುಳುಂ: ಬ್ಯಾಂಕ್ ಮೆನೇಜರ್… ಬೆಂಗಳೂರಿನ ಅಭಿವೃದ್ಧಿ ಸೊನ್ನೆ, ಬಿಬಿಎಂಪಿ ಚುನಾವಣೆ ನಡೆಸಿ: ಸರಕಾರಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಳೆ ಬೆಳೆಗೆ ದೃಷ್ಟಿ ತಾಗದಂತೆ ಅರೆಬೆತ್ತಲೆ ಮಾಡಲ್ ಗಳ ಫೋಟೋ ಅಳವಡಿಸಿದ ಕಿಲಾಡಿ… ಹಾವೇರಿ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ?: ರಾಜಕೀಯ ಕರಿನೆರಳು.!? State Budget | ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ… Deeptech & AI | ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನವೋದ್ಯಮಗಳಿಗೆ ನೆರವು: ಸಚಿವದ್ವಯರಾದ… ಇಂದಿರಾ ಕ್ಯಾಂಟಿನಿನಲ್ಲಿ ಕಳಪೆ ಗುಣಮಟ್ಟದ ಆಹಾರ: ಗುತ್ತಿಗೆ ರದ್ದುಪಡಿಸಲು ಕರವೇ ಒತ್ತಾಯ

ಇತ್ತೀಚಿನ ಸುದ್ದಿ

ಸಮುದ್ರ ಅಲೆಗಳ ಮೇಲೆ ಸಾಲುಸಾಲು ಸವಾಲು; ಕಡಲಾಳದಲ್ಲಿ ಕಾಡುವ “ಕೊಲ್ಪು”, ಡಾಲ್ಫಿನ್‌ ಅಳು!

24/02/2025, 19:56

ಮನೋಜ್‌ ಕೆ.ಬೆಂಗ್ರೆ ಮಂಗಳೂರು

info.reporterkarnatska@gmail.com

ಸುವಿಶಾಲ ಸಾಗರ- ಸಮುದ್ರದ ತಣ್ಣನೆಯ ಗುಣಸ್ವಭಾವದ ಜತೆಗೆ ತಲ್ಲಣಗೊಳಿಸುವ ಆತಂಕದ ಕ್ಷಣಗಳೂ ನಮಗೆಲ್ಲ ಗೊತ್ತು. ಹೀಗೆ ಯಾವುದೇ ಸಮಯ ಪರಿವರ್ತನೆಯಾಗುವ ನೀಲ ಜಲರಾಶಿಯೇ ಜಗತ್ತಿನ ಕೋಟ್ಯಂತರ ಜನರಿಗೆ ಅದರಲ್ಲೂ ಮೀನುಗಾರರ ಜೀವದುಸಿರು, ಬದುಕಿನಾಸರೆ.
ಹೀಗೆ ಮತ್ಸ್ಯ ಬೇಟೆಗಾಗಿ ಸಮುದ್ರಕ್ಕೆ ತೆರಳುವ ಮೀನುಗಾರರು ದಿನನಿತ್ಯವೂ ವಿವಿಧ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆಳ ಕಡಲ ಮೀನುಗಾರಿಕೆ ವೇಳೆ ಎದುರಾಗುವ ಅಪಾಯ- ಆತಂಕದ ಸರಮಾಲೆಯನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.
ಅಬ್ಬರದ ಅಲೆಗಳ ಮೇಲೆ ಜೋಕಾಲಿಯಾಡುತ್ತಾ ಮೀನುಗಾರಿಕೆ ನಡೆಸುತ್ತಿರುವ ಸಂದರ್ಭ ತಮ್ಮ ಬೋಟ್‌ ಗಳ ಬಳಿ ಅತಿ ವೇಗದಿಂದ ಸಾಗುವ ಸರಕು ಹಡಗುಗಳ ಧಾವಂತ, ತಟ ರಕ್ಷಣಾ ಪಡೆ ನಡೆಸುವ ತಪಾಸಣೆ-ವಿಚಾರಣೆ ಇತ್ಯಾದಿ ನಡುವೆ ಭೀತಿ-ಫಜೀತಿಗೀಡು ಮಾಡುವ ಕೆಲವೊಂದು ಆಕಸ್ಮಿಕ ಘಟನೆಗಳಿಗೂ ಎದೆಯೊಡ್ಡಬೇಕಾಗುತ್ತದೆ.
*ತೆರೆಗಳ ತೆಕ್ಕೆಗೆ ಬಿದ್ದರೆ ಗೊತ್ತೇ ಆಗುವುದಿಲ್ಲ!:*
ಕಡಲ ಪ್ರವೇಶ ಮತ್ತು ನಿರ್ಗಮನ ದ್ವಾರದಂತಿರುವ ಹೂಳು ತುಂಬಿರುವ ಅಳಿವೆ ಬಾಗಿಲಿನಿಂದ ಹಿಡಿದು, ಮೀನುಗಾರಿಕೆಯ ಪ್ರತಿ ಹಂತದಲ್ಲೂ ಕಡಲ ಮಕ್ಕಳು ಹತ್ತಾರು ಭಯಾತಂಕದ ಕ್ಷಣಗಳನ್ನು ಅನುಭವಿಸಬೇಕಾಗುತ್ತದೆ. ಬೋಟ್‌ ಗಳು ಅಲೆಗಳನ್ನು ಸೀಳಿಕೊಂಡು ನೆಗೆಯುತ್ತಾ ಮುನ್ನುಗ್ಗುತ್ತಿರುವಾಗ ಸಹಮೀನುಗಾರರ ಗಮನಕ್ಕೆ ಬಾರದಂತೆ ಅದೆಷ್ಟೋ ಮೀನುಗಾರರು ಅಲೆಗಳ ಹೊಡೆತಕ್ಕೆ ಸಿಲುಕಿ ಆಳ ಕಡಲಿಗೆ ಎಸೆಯಲ್ಪಡುತ್ತಾರೆ! ಹೀಗೆ ನೀರಿಗೆ ಬಿದ್ದ ಮೀನುಗಾರರು ಹಾಗೇ ಮೌನವಾಗಿ ನೇರ ಕಡಲ ಗರ್ಭ ಸೇರುತ್ತಾರೆ. ಕೆಲವು ಅದೃಷ್ಟಶಾಲಿಗಳು ಸಹಮೀನುಗಾರರಿಂದ ರಕ್ಷಿಸಲ್ಪಡುತ್ತಾರೆ. ಅಂದರೆ, ಪ್ರತಿಬಾರಿಯೂ ಪ್ರಾಣ ಪಣಕ್ಕಿಟ್ಟೇ ಮತ್ಸ್ಯಗಾರಿಕೆಗೆ ಹೋಗಿ ಬರಬೇಕಾಗಿದೆ.

*ಕಡಲಾಳದಲ್ಲಿ ʼಕೊಲ್ಪುʼಗಳು:* ಈ ಹಿಂದೆ ಮುಳುಗಿರುವ ಸರಕು ಸಾಗಾಟದ ಅತ್ಯಾಧುನಿಕ ಬೃಹತ್‌ ಹಡಗುಗಳು, ಮರಮಟ್ಟುಗಳಿಂದ ನಿರ್ಮಿತ ಹಾಯಿಹಡಗು(ಮಂಜಿ) ಗಳು ಹಾಗೂ ಫಿಶಿಂಗ್‌ ಬೋಟ್‌ ಗಳ ಅಳಿದುಳಿದ ಅವಶೇಷಗಳು ಹಾಗೇ ಸಮುದ್ರದ ಆಳದಲ್ಲಿ ಉಳಿದುಕೊಂಡಿರುತ್ತವೆ. ಮಂಗಳೂರು ಕರಾವಳಿಯ ಮೀನುಗಾರರು ಈ ತ್ಯಾಜ್ಯ(ಅವಶೇಷ) ಕ್ಕೆ “ಕೊಲ್ಪು” ಎಂದು ಕರೆಯುತ್ತಾರೆ. ಈ ಕೊಲ್ಪುಗಳಿಗೆ ಬಲೆ ಸಿಲುಕಿದರೆ ಆ ಬಲೆ ಸಂಪೂರ್ಣ ಚಿಂದಿಯಾಗುವುದು ಗ್ಯಾರಂಟಿ. ಕಡಲಾಳದ ಬಂಡೆಗಲ್ಲುಗಳೂ ಕೊಲ್ಪುಗಳಾಗಿ ಮೀನುಗಾರರನ್ನು ಕಾಡುತ್ತವೆ. ಕೆಲವೊಮ್ಮೆ ಬೋಟ್‌ ನ ಪ್ರೊಫೆಲ್ಲರ್‌ ಗೆ ಬಲೆ, ಹಗ್ಗ ಸಿಲುಕುತ್ತವೆ. ಆಗ ತಿಮಿಂಗಿಲ, ಶಾರ್ಕ್‌ ಸಹಿತ ಇತರ ಬೃಹತ್ ಜಲಚರಗಳ ಭೀತಿ ಮಧ್ಯೆ ಮುಳುಗಿ ಆ “ಬಂಧನ” ಬಿಡಿಸಬೇಕಾಗುತ್ತದೆ.

*ಬೇಡವಾದ ಅತಿಥಿಗಳ ಆಗಮನ:* ಬಲೆಗೆ ತೊಂದರೆ ನೀಡುವ ತೊಂದೆ- ಪುಚ್ಚೆ ಮೀನು, ಕಡಲ ಹಾವು(ಕಡ್ಲ ಮರಿ), ತೊಜ್ಜಿ(ಜೆಲ್ಲಿ ಫಿಶ್‌) ಬಲೆಯೊಳಗೆ ಸೇರಿಕೊಂಡರೆ ಮೀನುಗಾರರ ಮುಖ ಬಾಡುತ್ತವೆ. ಯಾಕೆಂದರೆ ಮೀನುಗಾರರಿಗೆ ಲಾಭ ರಹಿತ ಈ ಜಲಜೀವಿಗಳಿಂದ ಬಲೆಗೆ ಹಾನಿಯಾಗುವುದಲ್ಲದೆ, ಮೀನುಗಾರರ ಶರೀರಕ್ಕೂ ಅಪಾಯಕಾರಿಯಾಗಿದೆ.

*ತಿಮಿಂಗಿಲ- ಡಾಲ್ಫಿನ್‌ ಅನುಬಂಧ:* ಮೀನುಗಾರಿಕೆ ವೇಳೆ “ಸಾಗರ ಸಾಮ್ರಾಟ” ಖ್ಯಾತಿಯ ತಿಮಿಂಗಿಲಗಳ ದರ್ಶನ ಭಾಗ್ಯ ಆಗಾಗ ಮೀನುಗಾರರಿಗೆ ಲಭಿಸುತ್ತಿರುತ್ತವೆ. ಭಯಭಕ್ತಿ ಜತೆಗೆ ಭೀತಿ ಹುಟ್ಟಿಸುವ ಆ ವಿರಾಟ್‌ ಸ್ವರೂಪದ ಜೀವಿಯ ಠೀವಿ, ಗಾಂಭೀರ್ಯ ವರ್ಣಿಸಲು ಅಸಾಧ್ಯ. ಹಾಗೆಯೇ ಮಾನವರ ಬೆಸ್ಟ್‌ ಫ್ರೆಂಡ್‌ ಎಂಬ ಹಿರಿಮೆ ಹೊತ್ತ ಡಾಲ್ಫಿನ್‌ (ನಮ್ಮ ತುಳುನಾಡ ಕರಾವಳಿಯಲ್ಲಿ ಸುಯಿಂಪೆ, ಖೀರಿ, ಪಂಜಿ ಮೀನ್ ಎನ್ನುತ್ತಾರೆ) ಗಳ ಆಟ, ಹಾರಾಟ, ಕಸರತ್ತು ಬಲು ಚೆಂದ. ಮೀನುಗಾರರಿಗೆ ತೀರಾ ಸನಿಹದಿಂದ ಕಾಣ ಸಿಗುವ ಈ ಬುದ್ಧಿವಂತ ಮತ್ಸ್ಯ ಇನ್ನಿತರ ಮತ್ಸ್ಯಸಂಕುಲ ಮತ್ಸರ ಪಡುವಷ್ಟು ಮಾನವರಿಗೆ ಆಪ್ತ ಎಂಬುದರಲ್ಲಿ ಎರಡು ಮಾತಿಲ್ಲ.

*ಮನ ಕರಗಿಸುವ ಡಾಲ್ಫಿನ್‌ ಅಳು:* ಇತರ ಮೀನುಗಳೊಂದಿಗೆ ಕೆಲವೊಮ್ಮೆ ಕಡಲಾಮೆಗಳು ಹಾಗೂ ಡಾಲ್ಫಿನ್‌ ಗಳೂ ಬಲೆಯೊಳಗೆ ಬಂಧಿಯಾಗುತ್ತವೆ. ಆಮೆಗಳಂತೂ ಬಲೆಯನ್ನು ಚಿಂದಿ ಉಡಾಯಿಸುತ್ತವೆ. ಡಾಲ್ಫಿನ್‌ ಗಳು ಬಂಧಮುಕ್ತಕ್ಕಾಗಿ ತನ್ನ ಚಲನವಲನ ಮೂಲಕ ಗೋಗರೆಯುತ್ತವೆ. ಅಳಲು ಆರಂಭಿಸುತ್ತವೆ, ಕಣ್ಣಲ್ಲಿ ನೀರು ಜಿನುಗುತ್ತವೆ. ಡಾಲ್ಫಿನ್‌ ಗಳ ದೀನತೆಯ ನೋಟ, ಪ್ರಾಣ ಸಂಕಟ ಕಂಡು ನಮ್ಮ ಕರಾವಳಿಯ ಸಹೃದಯಿ ಮೀನುಗಾರರು ಆ ಕೂಡಲೇ ಜೋಪಾನವಾಗಿ ಮತ್ತೆ ಕಡಲಿಗೇ ಬಿಡುತ್ತಾರೆ.

*ಕಡಲ ಮಧ್ಯೆ ಮತ್ಸ್ಯಗಳ್ಳರು:* ಹೌದು! ಕಳ್ಳರು ಈಗ ನಮ್ಮ ಕರಾವಳಿಯ ಮೀನುಗಾರರನ್ನೂ ಕಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಸಮುದ್ರದಲ್ಲಿ 2024ರ ಜನವರಿ 30ರಂದು ಬೆಳಗ್ಗೆ 5ರ ಸುಮಾರಿಗೆ ದರೋಡೆಕೋರರ ತಂಡವೊಂದು ಆಳಕಡಲ ಬೋಟೊಂದರ ಮೇಲೆ ದಾಳಿ ನಡೆಸಿ, 6 ಮಂದಿ ಮೀನುಗಾರರಿಗೆ ಹಲ್ಲೆಗೈದು 4 ಮೊಬೈಲ್‌ ಹಾಗೂ ಲಕ್ಷಾಂತರ ಮೌಲ್ಯದ 12 ಬಾಕ್ಸ್‌ ಬೆಲೆ ಬಾಳುವ ಮೀನುಗಳೊಂದಿಗೆ ಪರಾರಿಯಾಗಿತ್ತು. ಮತ್ಸ್ಯಕ್ಷಾಮದ ಈ ಹೊತ್ತಿನಲ್ಲಿ ಮೀನುಗಾರರು, ಮತ್ಸ್ಯ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗಾಗಿ ಬವಣೆ ಪಡುತ್ತಿದ್ದು, ಕೇಂದ್ರ- ರಾಜ್ಯ ಸರಕಾರಗಳು ಕರಾವಳಿ ತೀರದ ಈ ಬಡಪಾಯಿಗಳತ್ತ ಚಿತ್ತ ಹರಿಸಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು