ಇತ್ತೀಚಿನ ಸುದ್ದಿ
ಚೀನಾದಲ್ಲಿ ನಡೆಯುವ ಏಷ್ಯನ್ ಗೇಮ್ಸ್: ಐಸ್ ಸ್ಕೇಟಿಂಗ್ ಗೆ ಕಡಲನಗರಿ ಮಂಗಳೂರಿನ ಅಣ್ಣ-ತಂಗಿ ಆಯ್ಕೆ
05/02/2025, 11:43
ಮಂಗಳೂರು(reporterkarnataka.com): ಚೀನಾದ ಹಾರ್ಬಿನ್‌ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಚಳಿಗಾಲದ ಏಷ್ಯನ್ ಗೇಮ್ಸ್ 2025ರ ಐಸ್ ಸ್ಕೇಟಿಂಗ್ ತಂಡಕ್ಕೆ ಮಂಗಳೂರಿನ ಅಣ್ಣ-ತಂಗಿ ಆಯ್ಕೆಯಾಗಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಡೇನಿಯಲ್ ಸಲ್ವಡೋರೆ ಕೊನ್ಸೆಸಾವ್ ಹಾಗೂ ಡ್ಯಾಶಿಯಲ್ ಅಮಂಡಾ ಕೊನ್ಸೆಸಾವ್ ಏಷ್ಯನ್ ಗೇಮ್ಸ್ ಗೆ ಆಯ್ಕೆಗೊಂಡಿದ್ದಾರೆ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಡೇನಿಯಲ್ ಹಾಗೂ ಡ್ಯಾಶಿಯಲ್ ಅಂತಿಮವಾಗಿ ಭಾರತೀಯ ಐಸ್ ಸ್ಕೇಟಿಂಗ್ ತಂಡಕ್ಕೆ ಆಯ್ಕೆಯಾದರು. ಇವರು ಮಂಗಳೂರಿನ ಫ್ರಾನ್ಸಿಸ್ ಮತ್ತು ಡೋರಿಸ್ ಕೊನ್ಸೆಸಾವ್ ದಂಪತಿಯ ಮಕ್ಕಳಾಗಿದ್ದು, ಡೇನಿಯಲ್ ಕೊನ್ಸೆಸಾವ್ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಇ. ವಿದ್ಯಾಭ್ಯಾಸ ಪಡೆಯುತ್ತಿದ್ದರೆ,ಡ್ಯಾಶಿಯಲ್ ಎಸ್‌ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿಯಾಗಿದ್ದಾಳೆ. ಇವರಿಬ್ಬರೂ ಬಾಲ್ಯದಿಂದಲೇ ಸ್ಕೇಟಿಂಗ್ ರಿಂಕ್‌ನಲ್ಲಿ ಅದ್ಭುತ ಸಾಧನೆ ಮೆರೆಯುತ್ತಾ ಬಂದಿದ್ದಾರೆ.
ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯರಾಗಿರೋ ಇವರಿಬ್ಬರಿಗೂ ರೋಲರ್ ಸ್ಕೇಟಿಂಗ್ ನಲ್ಲಿ ಮೋಹನ್‌ದಾಸ್ ಕೆ. ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ನೀಡುತ್ತಿದ್ದಾರೆ.ಐಸ್ ಸ್ಕೇಟಿಂಗ್‌ನಲ್ಲಿ ಕೆ. ಶ್ರೀಕಾಂತ್ ರಾವ್ ಮೈಸೂರು ಹಾಗೂ ಐಸ್ ಸ್ಕೇಟಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ತರಬೇತಿ ನೀಡಿರುತ್ತಾರೆ.ಡೇನಿಯಲ್ ಹಾಗೂ ಡ್ಯಾಶಿಯಲ್ ಕ್ರಮವಾಗಿ ಚೀನಾದ ಹಾರ್ಬಿನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಒಂದು ತಿಂಗಳ ನ ಕಾಲ ಐಸ್ ಸ್ಕೇಟಿಂಗ್‌ನ ತರಬೇತಿ ಪಡೆದುಕೊಂಡಿದ್ದರು.