ಇತ್ತೀಚಿನ ಸುದ್ದಿ
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ ಪ್ರತಿಭಟನೆ
15/01/2025, 18:58
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಗೋ ಹಿಂಸೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬಳ್ಳಾರಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದ ಬಳಿ ಸೇರಿದ ರೈತ ಮೋರ್ಚಾದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಚಾಮರಾಜ ಪೇಟೆಯ ಶಾಸಕರೂ ಆಗಿರುವ, ಸಚಿವ ಜಮೀರ್ ಅಹಮದ್ ಖಾನ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದ ಕಾರ್ಯಕರ್ತರು, ಗೋಮೂತ್ರ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ, ‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಆಕಳ ಕೆಚ್ಚಲು ಕೊಯ್ದು, ಕಾಲು ಕತ್ತರಿಸಲಾಗಿದೆ. ಘಟನೆಗೆ ಸಚಿವ ಜಮೀರ್ ಅವರ ಮೃದು ಧೋರಣೆಯೇ ಪರೋಕ್ಷವಾಗಿ ಕಾರಣವಾಗಿದೆ. ಭಾರತದಲ್ಲಿ ಆಕಳನ್ನು ಕಾಮಧೇನು ಎನ್ನಲಾಗುತ್ತದೆ. ಅವುಗಳ ಮೇಲಿನ ದಾಳಿ ಅಮಾನವೀಯ ಮತ್ತು ಖಂಡನೀಯ’ ಎಂದರು.
‘ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಆದರೆ, ಯಾವ ಪಾಪಕ್ಕಾಗಿ ಮೂಕ ಪ್ರಾಣಿಗಳ ಮೇಲೆ ಸೇಡು. ಇದು ಒಬ್ಬಿಬ್ಬರು ಮಾಡಿರುವ ಕೆಲಸವಲ್ಲ. ಘಟನೆಯ ಹಿಂದಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್ ಅಹಮದ್ ಖಾನ್ ವಿಫಲರಾಗಿದ್ದಾರೆ ಎಂದೂ ಅವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.