ಇತ್ತೀಚಿನ ಸುದ್ದಿ
ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ
20/12/2024, 20:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿರುವುದು ಖಂಡಿಸಿ ಚಿಕ್ಕಮಗಳೂರು ನಗರ ಹಾಗೂ ಕೊಟ್ಟಿಗೆ ಹಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಚಿಕ್ಕಮಗಳೂರಿನ ಹನುಮಂತಪ್ಪ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಎಂಜಿ ರಸ್ತೆಯಲ್ಲಿ ಮೆರವಣಿಗೆ ತೆರಳಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.
ಕೊಟ್ಟಿಗೆಹಾರ ವೃತ್ತದಲ್ಲಿ ಬಿಜೆಪಿ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯಲ್ಲಿ ನಡೆಸಲಾಯಿತು. ಬಣಕಲ್ ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಕೆ.ಕೆ.ಯತೀಶ್ ಮಾತನಾಡಿ, ಸಿ.ಟಿ.ರವಿಯವರಿಗೆ ನೋಟೀಸ್ ನೀಡದೇ ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯವಾಗಿದೆ. ಅದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದರು.ಮುಖಂಡ ಬಿ.ಎಂ.ಭರತ್ ಮಾತನಾಡಿ ‘ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನು ಪ್ರಾಣಿಯಂತೆ ವರ್ತಿಸಿ ಅವರನ್ನು ಬಂಧಿಸಿದ್ದಾರೆ. ಎಲ್ಲಾ ಧರ್ಮದವರು ಸಹಬಾಳ್ವೆಯಿಂದ ಬದುಕುತ್ತಿದ್ದು ಕಾಂಗ್ರೆಸ್ ಸರ್ಕಾರ ಧರ್ಮಗಳ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಇಂತಹ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು’ಎಂದರು. ಸಂಘಟನಾ ಕಾರ್ಯದರ್ಶಿ ಚಿರಾಗ್ ಕೊಟ್ರಕೆರೆ ಮಾತನಾಡಿ’ ಕಾಂಗ್ರೆಸ್ ಹಗರಣಗಳನ್ನು ಮುಚ್ಚಿ ಹಾಕಲು ಸಿ.ಟಿ.ರವಿ ಅವರನ್ನು ಟಾರ್ಗೇಟ್ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತುಘಲಕ್ ನೀತಿ ಅನುಸರಿಸುತ್ತಿದೆ. ಅತ್ತೆಗೊಂದು ಕಾಲ,ಸೊಸೆಗೊಂದು ಕಾಲ ಬರುತ್ತೆ ಅನ್ನೊದನ್ನು ಎಲ್ಲಾ ಅಧಿಕಾರಿಗಳು ಮನಗಾಣಬೇಕು. ಮುಂದೆ ಬಿಜೆಪಿ ಸರ್ಕಾರವೂ ಅಧಿಕಾರಕ್ಕೆ ಬರುತ್ತದೆ. ಇಂತಹ ಕೆಟ್ಟ ಸರ್ಕಾರದ ನೀತಿಯನ್ನು ನಾವು ಖಂಡಿಸಬೇಕಿದೆ’ಎಂದರು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಸಾಗರ್ ತರುವೆ, ಮುಖಂಡರಾದ ಸಂಜಯ್ ಗೌಡ,ಬಿ.ಬಿ.ಮಂಜುನಾಥ್, ಎ.ಆರ್.ಅಭಿಲಾಷ್, ರಮೇಶ್ ಗುಡ್ಡಹಟ್ಟಿ, ಸ್ವರೂಪ್ ಕಬ್ಬಿಣ ಸೇತುವೆ, ಎ.ಎಸ್.ಅಶ್ವತ್ಥ್, ಅಭಿ ಜಾವಳಿ, ಕಾರ್ತಿಕ್, ಟಿ.ಎಂ.ನರೇಂದ್ರ,ಕೃಷ್ಣಮೂರ್ತಿ, ಶರತ್ ಫಲ್ಗುಣಿ, ಮನೋಜ್, ಅಂಜನ್, ಸಾಗರ್ ಹುಲ್ಲೇಮನೆ, ಅರುಣ್ ಪೂಜಾರಿ, ವಸಂತ ಶೆಟ್ಟಿ,ದೇವೇಂದ್ರ ಮತ್ತಿತರರು ಇದ್ದರು.