ಇತ್ತೀಚಿನ ಸುದ್ದಿ
50 ಸ್ಥಳೀಯ ಸಂಸ್ಥೆಗಳ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ: ಬೆಳಗಾವಿ ಅಧಿವೇಶನದಲ್ಲಿ ಸಚಿವ ಬಿ.ಎಸ್.ಸುರೇಶ್
13/12/2024, 18:30
ಬೆಳಗಾವಿ(reporterkarnataka.com): ರಾಜ್ಯದ ವಿವಿಧ ಕಡೆಗಳಿಂದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ, ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ, ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ 50ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದ ವೇಳೆ ಅವರು ಸದನಕ್ಕೆ ಮಾಹಿತಿ ನೀಡಿದರು.
20,000 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದರೆ ಮಾತ್ರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬಹುದು. ಇದರೊಂದಿಗೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾದ ಮೇಲೆ ಅಗತ್ಯ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಅನುದಾನವನ್ನು ಸಹ ನೀಡಬೇಕು. ಸ್ವೀಕೃತವಾದ ಎಲ್ಲ ಪ್ರಸ್ತಾವನೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ಭರವಸೆ ನೀಡಿದರು.
*ಗೋಕರ್ಣ ಪಟ್ಟಣ ಪಂಚಾಯಿತಿ ರಚನೆಗೆ ಮನವಿ:* ಕುಮುಟ ಕ್ಷೇತ್ರದ ಶಾಸಕ ದಿನಕರ್ ಕೇಶವ್ ಶೆಟ್ಟಿಯವರು ಧಾರ್ಮಿಕ ಶ್ರದ್ಧಾ ಕ್ಷೇತ್ರವಾದ ಗೋಕರ್ಣ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆ ಏರಿಸುವಂತೆ ಕೋರಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರಲ್ಲಿ ಕೋರಿದರು.
ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕರುಗಳಾದ ವಿಜಯೇಂದ್ರ, ಡಾ.ಅಶ್ವತ್ ನಾರಾಯಣ, ಸುನೀಲ್ ಕುಮಾರ್, ಭೈರತಿ ಬಸವರಾಜ್ ಅವರು ಗೋಕರ್ಣ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಸರ್ಕಾರ ಕೂಡಲೇ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು. ಲಕ್ಷಾಂತರ ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಆದ್ದರಿಂದ ಸರ್ಕಾರ ಸ್ವಚ್ಛತೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. 2011 ರ ಜನಗಣತಿಯಂತೆ ಗೋಕರ್ಣದಲ್ಲಿ 13,539 ಜನಸಂಖ್ಯೆ ಇದೆ. ವಿಸ್ತೀರ್ಣ 33.1 ಚದರ ಕಿ.ಮೀ. ಇದ್ದು, ಜನಸಾಂದ್ರತೆ ಪ್ರತೀ ಚದರ ಕಿ.ಮೀ.ಗೆ 409 ಇದೆ. 2015ರಲ್ಲಿ ಸಚಿವ ಸಂಪುಟ ಸಭೆಯಲ್ಲಿ 2011ರ ಜನಗಣತಿಯಲ್ಲಿ 15,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೆ ಏರಿಸಲು ಪರಿಗಣಿಸಲು ನಿರ್ಧರಿಸಲಾಗಿದೆ. ಆದಾಗ್ಯೂ ಗೋಕರ್ಣದ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಶಾಸಕರು, ಅಧಿಕಾರಿಗಳೊಂದಗೆ ಸಭೆ ನಡೆಸಿ ಸಕಾರಾತ್ಮವಾಗಿ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.
ಇದೇ ವೇಳೆ ಶಾಸಕ ಪ್ರಭು ಚವ್ಹಾಣ್ ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಹಾಗೂ ಕಮಲ್‌ನಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವ ರಹೀಂ ಖಾನ್ ಅವರಲ್ಲಿ ಮನವಿ ಮಾಡಿದರು.