ಇತ್ತೀಚಿನ ಸುದ್ದಿ
ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯವಾಗಿದೆ; ಬಜೆಟ್ ನಲ್ಲಿ 3 ಲಕ್ಷದ 71 ಸಾವಿರ ಕೋಟಿ ರೂ. ಅಭಿವೃದ್ಧಿಗಳಿಗೆ ನೀಡಲಾಗುತ್ತಿದೆ: ಸಿಎಂ ಸಿದ್ದರಾಮಯ್ಯ
12/12/2024, 19:30

ಬೆಳಗಾವಿ(reporterkarnataka.com): ರಾಜ್ಯ ಬಜೆಟ್ ನಲ್ಲಿ 3 ಲಕ್ಷದ 71 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಳಿಗೆ ನೀಡಲಾಗುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯವಾಗಿದೆ. 1 ಲಕ್ಷ 4 ಸಾವಿರ ಕೋಟಿ ಸಾಲ ಮಾಡಿದರೂ ಕೂಡ ಮಾನದಂಡ ಮೀರಿಲ್ಲ. ಶೇ.25 ರ ಒಳಗಡೆಯೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿಯವರ ಪ್ರಶ್ನೆಗೆ ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿದರು.
*ಪ್ರತಿಪಕ್ಷಗಳ ಆರೋಪ ಸತ್ಯಕ್ಕೆ ದೂರ:* ಯಾವುದೇ ಸರ್ಕಾರ ತನ್ನ ಖರ್ಚುಗಳನ್ನು ಮಾಡಬೇಕಾದರೆ ಸಾಲವನ್ನು ಮಾಡಬೇಕಾಗುತ್ತದೆ. ನಮ್ಮ ಇತಿಮಿತಿಗಳನ್ನು ಪರಿಶೀಲಿಸಿ ಸಾಲ ಮಾಡಲಾಗುತ್ತದೆ. ಒಟ್ಟು ಸಾಲ ಶೇ.25 ವರೆಗೂ ಮೀರಬಾರದು ಎಂಬ ಮಾನದಂಡಗಳಿದ್ದು, ನಮ್ಮ ಸರ್ಕಾರದ ಸಾಲ ಮಿತಿಯ ಒಳಗಡೆ ಇದೆ. ರಾಜ್ಯ ಸರ್ಕಾರ 1ಲಕ್ಷದ 4 ಸಾವಿರ ಕೋಟಿ ರೂಗಳ ಸಾಲವನ್ನು ಮಾಡಲಾಗಿದ್ದು,ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದ ಸಾಲ ಕಡಿಮೆ ಇದೆ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 52000 ಕೋಟಿ ರೂ.ಗಳನ್ನು ನೀಡಲಾಗಿದೆ. ಉಳಿದ ಹಣವನ್ನು ಅಭಿವೃದ್ಧಿಗೆ ನೀಡಲಾಗುತ್ತಿದೆ. ವಿರೋಧ ಪಕ್ಷದವರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ನುಡಿದರು.
*ಎಸ್ ಸಿ ಪಿ/ಟಿಎಸ್ ಪಿ ಅನುದಾನ:* ಎಸ್ ಸಿ ಪಿ/ಟಿಎಸ್ ಪಿಗಳಿಗೆ ಬಳಸಲಾಗಿರುವ ಹಣ 2017-18ನೇ ಸಾಲಿನಲ್ಲಿ 36 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದೆ. ಈ ವರ್ಷ 39, 272 ಕೋಟಿ ರೂ.ಗಳ ಅನುದಾನ ಇಡಲಾಗಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಎಸ್ ಸಿ ಪಿ/ಟಿ ಎಸ್ ಪಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಈ ಕಾಯ್ದೆ ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ ಸಿಎಂ, ಕೇಂದ್ರ ಸರ್ಕಾರ ಏಕೆ ಈ ಕಾಯ್ದೆ ಮಾಡಿಲ್ಲ ಎಂದು ಮರು ಪ್ರಶ್ನಿಸಿದರು.