ಇತ್ತೀಚಿನ ಸುದ್ದಿ
ಕಲ್ಲಡ್ಕ ಕ್ರೀಡೋತ್ಸವಕ್ಕೆ ನಾಳೆ ಆರೆಸ್ಸೆಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಚಾಲನೆ: ಝಡ್ ಪ್ಲಸ್ ಪ್ಲಸ್ ಭದ್ರತೆ
06/12/2024, 21:10

ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯುನ್ನತ ನಾಯಕ ಸರಸಂಘ ಚಾಲಕ ಡಾ. ಮೋಹನ್ ಜೀ ಭಾಗವತ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.7 ರಂದು ವರ್ಣರಂಜಿತ ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ತಿಳಿಸಿದ್ದಾರೆ.
ಶ್ರೀರಾಮ ವಿದ್ಯಾಕೇಂದ್ರವು ರಾಷ್ಟ್ರೀಯ ಚಿಂತನೆಯ ಶಿಕ್ಷಣ ಸಂಸ್ಥೆಯಾಗಿ ಪ್ರಾರಂಭಗೊಂಡು ಕಳೆದ ನಾಲ್ಕು ದಶಕಗಳಿಂದ ಶಿಶು ಮಂದಿರದಿಂದ ಪದವಿ ತರಗತಿಗಳವರೆಗೆ ಕನ್ನಡ ಮಾಧ್ಯಮದಲ್ಲಿಯೇ ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸುವ ಸಂಸ್ಥೆಯಾಗಿದೆ.
*ಝಡ್ ಪ್ಲಸ್ ಪ್ಲಸ್ ಭದ್ರತೆ*
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವವು ವಿಶೇಷ ಆಕರ್ಷಣೆಯಾಗಿದ್ದು ಈವರ್ಷದ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶಕ್ಕೆ ಸರಸಂಘ ಚಾಲಕರು ಆಗಮಿಸುತ್ತಿರುವುದು ಮೊದಲ ಬಾರಿಯಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಿಗೆ ಸಂತಸವನ್ನು ತಂದಿದೆ.
ಡಿ 6ರಂದು ಮಂಗಳೂರಿಗೆ ಆಗಮಿಸಲಿರುವ ಮೋಹನ್ ಜಿ ಭಾಗವತ್ ರವರಿಗೆ ಝಡ್ ಪ್ಲಸ್ ಪ್ಲಸ್ ಭದ್ರತೆಯನ್ನು ನೀಡಲಾಗುತ್ತದೆ. ಮಂಗಳೂರಿನಿಂದ ಡಿ. 7 ರಂದು ಸಂಜೆ 5 ಗಂಟೆಗೆ ಕಲ್ಲಡ್ಕಕ್ಕೆ ಆಗಮಿಸಲಿರುವ ಮೋಹನ್ ಜಿ ಭಾಗವತ್ ರವರು ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಮಾರ್ಗದರ್ಶನ ಮಾಡಲಿದ್ದಾರೆ .
*ಎರಡುವರೆ ಗಂಟೆ ವೈವಿಧ್ಯಮಯ ಪ್ರದರ್ಶನ*
ಸಂಜೆ 6.30ರಿಂದ 9 ಗಂಟೆಯವರೆಗೆ ವಿವಿಧ ಶಾರೀರಿಕ ಸಾಂಸ್ಕೃತಿಕ ಪ್ರದರ್ಶನಗಳನ್ನು ಸರಸಂಘಚಾಲಕರು ವೀಕ್ಷಿಸಲಿದ್ದಾರೆ. ವಿದ್ಯಾಕೇಂದ್ರ 3500 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಸಂಯೋಜನೆಯಲ್ಲಿ ಭಾಗವಹಿಸಲಿದ್ದಾರೆ. ಶಿಶು ನೃತ್ಯ , ಪಥ ಸಂಚಲನ , ಘೋಷ್ ಪ್ರದರ್ಶನ ,ಜಡೆ ಕೋಲಾಟ, ನಿಯುದ್ಧ, ದೀಪಾರತಿ,ಯೋಗಾಸನ, ನೃತ್ಯ ಭಜನೆ , ಮಲ್ಲಕಂಬ, ತಿರುಗುವ ಮಲ್ಲಕಂಬ , ಸಾಂಸ್ಕೃತಿಕ ನೃತ್ಯ, ಬೆಂಕಿ ಸಾಹಸ , ಏಕಚಕ್ರ ದ್ವಿಚಕ್ರ ಸಮತೋಲನ,ಕಾಲ್ಚಕ್ರ, ಕೂಪಿಕಾ ಹೀಗೆ ವೈವಿಧ್ಯಮಯ ವರ್ಣರಂಜಿತ ಪ್ರದರ್ಶನಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ.
*ವಿಶೇಷ ವೀಕ್ಷಣಾ ಗ್ಯಾಲರಿಗಳು*
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ , ಸಂಚಾಲಕ ವಸಂತ ಮಾಧವ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಇವರ ಮಾರ್ಗದರ್ಶನದಲ್ಲಿ ಪರಿಣತ ಶಿಕ್ಷಕರ ನಿರ್ದೇಶನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ರಚಿಸಲಾಗಿದೆ. ಸಾರ್ವಜನಿಕರು ವೀಕ್ಷಿಸುವುದಕ್ಕಾಗಿ ವಿಶೇಷ ಗ್ಯಾಲರಿಗಳನ್ನು ಮಾಡಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.