ಇತ್ತೀಚಿನ ಸುದ್ದಿ
ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ ಪಡೆಯಿಂದ ಕೈವಶವಾದ ಶಿಗ್ಗಾವಿ
23/11/2024, 16:29
ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೀಶ್ವರ್ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ಸಿ.ಪಿ. ಯೋಗೀಶ್ವರ್ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪುತ್ರ ಆಗಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರು ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು 14 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ಭರತ್ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ. ಇದು ಬಿಜೆಪಿ ಸತತವಾಗಿ 4 ಬಾರಿ ಗೆದ್ದ ಕ್ಷೇತ್ರವಾಗಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿಂದ ಆಯ್ಕೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವ್ ಗೆ ರಾಜೀನಾಮೆ ನೀಡಿದ್ದರು. ಉಪ ಚುನಾವಣೆಯಲ್ಲಿ ಅವರ ಪುತ್ರ ಭರತ್ ಬೊಮ್ಮಾಯಿ ಸ್ಪರ್ಧಿಸಿದ್ದರು.
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಲಿದ್ದಾರೆ.
ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ವಿಧಾನಸಭಾ ಕ್ಷೇತ್ರಗಳಿಗೆ 2024ರ ನವೆಂಬರ್ 13ರಂದು ನಡೆದಿತ್ತು.
ಚನ್ನಪಟ್ಟಣದಲ್ಲಿ ಅತ್ಯಧಿಕ ಮತದಾನ 88.80% ರಷ್ಟು ಮತದಾನ ನಡೆದರೆ, ಶಿಗ್ಗಾವಿಯಲ್ಲಿ 80.48%ರಷ್ಟು ಹಾಗೂ ಸಂಡೂರಿನಲ್ಲಿ 76.24ರಷ್ಟು ಮತದಾನ ನಡೆದಿದೆ.