ಇತ್ತೀಚಿನ ಸುದ್ದಿ
ಸೋಮೇಶ್ವರ ಸಮೀಪದ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಘೋರ ದುರಂತ: ಮೈಸೂರು ಮೂಲದ 3 ಮಂದಿ ಯುವತಿಯರ ದಾರುಣ ಸಾವು
17/11/2024, 21:27

ಉಳ್ಳಾಲ(reporterkarnataka.com): ಸೋಮೇಶ್ವರ ಸಮೀಪದ ಖಾಸಗಿ ರೆಸಾರ್ಟ್ ವೊಂದರ ಈಜುಕೊಳದದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಸೋಮೇಶ್ವರ ಉಚ್ಚಿಲದ ಪೆರಿಬೈಲ್ ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ಈ ದುರಂತ ನಡೆದಿದೆ. ಸಾವನ್ನಪ್ಪಿದವರನ್ನು ಮೈಸೂರು ಕುರುಬಾರ ಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತಾ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆಯ ಕೆ.ಆರ್. ಮೊಹಲ್ಲಾ ನಿವಾಸಿ ಪಾರ್ವತಿ ಎಸ್. (20) ಹಾಗೂ ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನಾ ಎನ್.(21) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಖಾಸಗಿ ರೆಸಾರ್ಟ್ ಗೆ ಬಂದಿದ್ದ ಮೂವರು ಯುವತಿಯರು ರೂಮ್ ನಂ 2ರಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ರೆಸಾರ್ಟ್ ಮುಂಭಾಗದಲ್ಲಿನ ಈಜುಕೊಳಕ್ಕಿಳಿದು ನೀರಾಟ ವಾಡುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ. ಯುವತಿಯರು ಈಜುಕೊಳದ ದಂಡೆಯಲ್ಲಿ ಹೊರ ಉಡುಪುಗಳನ್ನು ಕಳಚಿಟ್ಟಿದ್ದು ಐ ಪೋನ್ ಒಂದನ್ನು ಈಜು ಕೊಳದ ನೀರಿಗೆ ಗುರಿಯಾಗಿ ರೆಕಾರ್ಡ್ ಇಟ್ಟು ನೀರಾಟ ಆಡಲು ಇಳಿದಿದ್ದರು.
ಯುವತಿಯರಿಗೆ ಈಜು ತಿಳಿಯದೆ ಇರುವುದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ರೆಸಾರ್ಟ್ ಸಿಬ್ಬಂದಿಗಳು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಯುವತಿಯರು ನೀರಲ್ಲಿ ಮುಳುಗುತ್ತಿರುವ ಘಟನೆಯ ವೀಡಿಯೋ ಚಿತ್ರಣ ಸಿಸಿಟಿವಿಯಲ್ಲಿ ದಾಖಲಾಗಿದೆ.
ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಎನ್. ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.