4:51 PM Thursday21 - November 2024
ಬ್ರೇಕಿಂಗ್ ನ್ಯೂಸ್
ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್… ಮೂವರು ಯುವತಿಯರ ಸಾವಿಗೆ ಕಾರಣವಾದ ಸೋಮೇಶ್ವರ ಬೀಚ್ ರೆಸಾಟ್೯ಗೆ ಬೀಗಮುದ್ರೆ ಬಂಟ್ವಾಳ ಸಮೀಪದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು: ಮನೆಯಂಗಳದಲ್ಲಿ ನಿಂತಿದ್ದ ವೇಳೆ… ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಡಗರ -ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿದ ಚಿಕ್ಕ… ಸಹಕಾರಿ ಕ್ಷೇತ್ರ ಜಾತಿ, ಪಕ್ಷಗಳ ಆಧಾರದಲ್ಲಿ ಕಾರ್ಯ ನಿರ್ವಹಿಸಬಾರದು: ಮಂಗಳೂರಿನಲ್ಲಿ ಸಚಿವ ಕೆ.ಎನ್.… ಉತ್ತರ ಪ್ರದೇಶ: ಝಾನ್ಸಿ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅಪಘಾತ; ಕನಿಷ್ಠ 10 ನವಜಾತ… ಚಾರ್ಮಾಡಿ ಘಾಟ್‌ ರಸ್ತೆಗೆ 343.74 ಕೋಟಿ ಬಿಡುಗಡೆ: ಅಭಿವೃದ್ಧಿ ಹೆಸರಿನಲ್ಲಿ 10 ವರ್ಷ… ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ: ನ. 17ರಂದು ಚಿಕ್ಕಜಾತ್ರಾ ಮಹೋತ್ಸವ, 19ರಂದು ತೆಪ್ಪೋತ್ಸವ

ಇತ್ತೀಚಿನ ಸುದ್ದಿ

ಭಾಷೆಗಳ ನಡುವೆ ಜಗಳ ಹುಟ್ಟಿಸುವುದು ಕೆಟ್ಟ ರಾಜಕಾರಣ: ಡಾ.ಪುರುಷೋತ್ತಮ ಬಿಳಿಮಲೆ

16/11/2024, 20:54

ಮಂಜೇಶ್ವರ(reporterkarnataka.com): ಬಹುಭಾಷಿಕ ಹಾಗೂ ಬಹು ಸಂಸ್ಕೃತಿಗಳ ಸಮುದಾಯದವರಾದ ದಕ್ಷಿಣ ಭಾರತೀಯರು ಪರಸ್ಪರ ಕಚ್ಚಾಡುವುದನ್ನು ಮುಂದುವರೆಸಿದಲ್ಲಿ ದೇಶ ಶೀಘ್ರವಾಗಿ ಹಿಂದಿಮಯವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.


ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೇರಳ ಮತ್ತು ಗೋವಾ ರಾಜ್ಯದ 149 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಭಿನ್ನ ಭಾಷಿಕರ ನಡುವೆ ವೈಮನಸ್ಯವನ್ನು ಮೂಡಿಸುವ ಕೆಲಸವನ್ನು ತಮ್ಮ ಉಳಿವಿಗಾಗಿ ರಾಜಕಾರಣಿಗಳು ಮುಂದುವರೆಸುತ್ತಲೇ ಇದ್ದು, ಇದು ಭಾಷೆಗಳ ಕಟ್ಟುವಿಕೆಗೆ ಮಾರಕವಾಗಿದೆ. ದಕ್ಷಿಣ ಭಾರತೀಯ ರಾಜ್ಯಗಳ ಭಾಷೆಗಳು ಹಾಗೂ ಹಿಂದಿ ಭಾಷೆಯ ಬೆಳವಣಿಗೆಯ ಇಂದಿನ ಗತಿಯನ್ನು ತುಲನೆ ಮಾಡಿದ್ದಲ್ಲಿ ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಭಾಷೆಗಳು ಅವನತಿಯ ಕಡೆ ಮುಖ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸಂವಿಧಾನವು ಭಾಷಿಕವಾಗಿ ದೇಶದ ಜನಕ್ಕೆ ಹಲವಾರು ಹಕ್ಕುಗಳನ್ನು ಕೊಟ್ಟಿದೆ. ರಾಜ್ಯ ಸರ್ಕಾರಗಳು ಗಡಿಭಾಗಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರುಗಳ ಹಿತ ಕಾಯಲು ಪ್ರತ್ಯೇಕ ಭಾಷಾ ನಿರ್ದೇಶಕರನ್ನು ನೇಮಿಸಬೇಕಿದ್ದು, ಹಲವು ರಾಜ್ಯಗಳು ಈ ಕುರಿತಂತೆ ಉತ್ಸುಕವಾಗಿಲ್ಲ. ಸರ್ಕಾರಗಳು ತಮ್ಮ ನಾಡಿನ ಅಲ್ಪಸಂಖ್ಯಾತ ಭಾಷೆಗಳ ಕುರಿತಂತೆ ಗೌರವ ಹೊಂದಬೇಕಾದ್ದು ಪ್ರಾಥಮಿಕ ಜವಾಬ್ದಾರಿಯಾಗಿದ್ದು, ಕರ್ನಾಟಕದ ಎಲ್ಲ ನೆರೆ ರಾಜ್ಯಗಳ ಸರ್ಕಾರಗಳಿಗೆ ಸಂವಿಧಾನದತ್ತ ಅಧಿಕಾರದಂತೆ ಭಾಷಾ ನಿರ್ದೇಶಕರನ್ನು ನೇಮಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಲಿದೆ ಎಂದು ಡಾ.ಬಿಳಿಮಲೆ ತಿಳಿಸಿದರು.
ಒಂದು ಲಕ್ಷ ಎಂಬತ್ತು ಸಾವಿರ ಕೋಟಿ ರೂ.ಗಳ ಆಯವ್ಯಯ ಗಾತ್ರ ಹೊಂದಿರುವ ಕೇರಳ ರಾಜ್ಯ ಅಲ್ಲಿನ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸದೆ ಇರುವುದು ಅಕ್ಷಮ್ಯವೆಂದ ಡಾ. ಬಿಳಿಮಲೆ, ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಅಲ್ಪಸಂಖ್ಯಾತ ಕನ್ನಡಿಗರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಕ್ರಮವಾಗಿದೆ ಎಂದರು.
*ನಾವು ಮಲೆಯಾಳಿಗರಲ್ಲ, ಕೇರಳದ ಕನ್ನಡಿಗರು: ಮಂಜೇಶ್ವರದ ಶಾಸಕ ಎ.ಕೆ.ಎಂ.ಆಶ್ರಫ್*
ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಪ್ರದೇಶ 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ದುರದೃಷ್ಟವಶಾತ್ ಕೇರಳದ ಭಾಗವಾಯಿತು. ಆದರೆ ಅಲ್ಲಿನ ಕನ್ನಡಿಗರು ಕನ್ನಡ ಭಾಷೆಯನ್ನು ಮರೆಯದೆ ತಲೆತಲಾಂತರಗಳಿಂದ ಅದನ್ನು ಪೋಷಿಸಿಕೊಂಡು ಬರುತ್ತಿರುವುದು ಅವರ ಕನ್ನಡ ಪ್ರೇಮವನ್ನು ಅಭಿವ್ಯಕ್ತಿಸುತ್ತದೆ. ನಾವು ಮಲೆಯಾಳಿಗಳೆಂದು ಗುರುತಿಸಿಕೊಳ್ಳುವುದಕ್ಕಿಂತ ಕೇರಳದ ಕನ್ನಡಿಗರೆಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರದ ಶಾಸಕ ಎ.ಕೆ.ಎಂ.ಆಶ್ರಫ್ ಹೇಳಿದರು.
ಕರ್ನಾಟಕ ಸರ್ಕಾರದ ಈ ರೀತಿಯ ಸ್ಪಂದನಾಶೀಲ ಕಾರ್ಯಕ್ರಮಗಳು ಗಡಿನಾಡಿನ ಕನ್ನಡಿಗರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತವೆ ಎಂದ ಎ.ಕೆ.ಎಂ.ಆಶ್ರಫ್, ಪ್ರಾಧಿಕಾರದ ಈ ಪ್ರಯತ್ನ ಶ್ಲಾಘನೀಯ ಎಂದರು.
ತಾವು ಮೊದಲ ಬಾರಿಗೆ ಕೇರಳದ ವಿಧಾನಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು, ಮೊದಲ ಭಾಷಣದ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಕವನ ವಾಚನವನ್ನು ಮಾಡಿದ್ದು ರೋಮಾಂಚಕ ಅನುಭವವೆಂದು ನೆನಪಿಸಿಕೊಂಡ ಆಶ್ರಫ್ ರವರು ಕಾಸರಗೋಡು ಕನ್ನಡಿಗರ ಹಿತಕ್ಕೆ ತಾವು ಎಂದೂ ಬದ್ಧರೆಂದು ತಿಳಿಸಿದರು.
*ಬಹುಭಾಷಿಕತೆ ಸೃಜನಶೀಲತೆಯ ಮೂಲಸತ್ವ*
ಸಾಹಿತಿ ಡಾ.ಜ್ಯೋತಿ ಚೆಳ್ಯಾರು ಅವರು ಮಾತನಾಡಿ, ಗಡಿನಾಡಿನ ಕನ್ನಡಿಗರು ಹಿಂದಿನಿಂದಲೂ ಸೃಜನಶೀಲ ಸಾಹಿತ್ಯ ವಲಯದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು, ಈ ಪರಂಪರೆ ಇಂದಿನ ಯುವ ಲೇಖಕಕರವರೆಗೂ ಮುಂದುವರೆದಿದೆ. ಕನ್ನಡ ಭಾಷೆಯ ವಿದ್ಯಾಭ್ಯಾಸ ಇಂತಹ ಪರಂಪರೆಗೆ ನಾಂದಿಯಾಗಿದ್ದು, ಗಡಿನಾಡಿನ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಕನ್ನಡವನ್ನು ಓದಬೇಕು ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಅವರು ಸ್ವಾಗತಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾದ ಶಮೀನಾ ಇಕ್ಬಾಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋಲ್ಡನ್ ರೆಹಮಾನ್, ಮಂಜೇಶ್ವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜೀನ್ ಲವೀನಾ ಮೊಂತೆರೋ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಎಲ್ಲ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಕವಿ ಗೋವಿಂದ ಪೈ ರವರು ವಾಸಿಸುತ್ತಿದ್ದ ಮನೆಗೆ ಎಲ್ಲ ಗಣ್ಯ ಅತಿಥಿಗಳು ಭೇಟಿ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು