ಇತ್ತೀಚಿನ ಸುದ್ದಿ
ನಂಜನಗೂಡು: ರೈತ ಫಲಾನುಭವಿಗಳಿಗೆ ವಿವಿಧ ಕೃಷಿ ಯಂತ್ರೋಪಕರಣಗಳ ವಿತರಣೆ
16/11/2024, 17:55

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕೃಷಿ ಇಲಾಖೆ ವತಿಯಿಂದ 2024- 25ನೇ ಸಾಲಿಗೆ ರೈತ ಫಲಾನುಭವಿಗಳಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಯಿತು.
ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ದರ್ಶನ್ ದ್ರುವ ನಾರಾಯಣ್ ಹಾಗೂ ಮತ್ತಿತರ ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ನೆರವೇರಿಸಿದರು. ಬಳಿಕ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಇಂದಿನ ಆಧುನಿಕ ಕೃಷಿಗೆ ಕೃಷಿ ಯಂತ್ರೋಪಕರಣಗಳ ಅವಶ್ಯಕತೆ ಇದೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಇಂದು ರೈತರಿಗೆ ಈ ಯಂತ್ರೋಪಕರಣಗಳು ವರದಾನವಾಗಿವೆ. ಹಾಗಾಗಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿಗುವ ಈ ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಂಡು ರೈತರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರವಿ ಮಾತನಾಡಿ, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಬಗ್ಗೆ ತಿಳಿಸಿ ಪರಿಶಿಷ್ಟ ಜಾತಿ ಪಂಗಡ ದ ರೈತರಿಗೆ ಶೇ.90ರಷ್ಟು ರಿಯಾಯಿತಿ ಸಿಗಲಿದೆ. ಸಾಮಾನ್ಯ ವರ್ಗದ ರೈತರಿಗೆ 50% ರಿಯಾಯಿತಿ ದರದಲ್ಲಿ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳು ಸಿಗಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ತಾಲೂಕಿನ ನೂರಾರು ರೈತ ಪಲಾನುಭವಿಗಳಿಗೆ ಶಾಸಕರು ಟ್ರಾಕ್ಟರ್, ಟಿಲ್ಲರ್, ಡೀಸೆಲ್ ಪಂಪ್ ಮೋಟಾರ್ ಗಳು, ಪೈಪ್ ಗಳು, ಸ್ಪ್ರಿಂಕ್ಲರ್ ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಸದಸ್ಯೆ ಗಾಯತ್ರಿ ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಕುರಟ್ಟಿ ಮಹೇಶ್, ಮುಖಂಡರಾದ ನಾಗೇಶ್ ರಾಜ್, ಕರಳಪುರ ನಾಗರಾಜ್, ಜಿಲ್ಲಾ ಕೃಷಿಸಹಾಯಕ ನಿರ್ದೇಶಕರಾದ ಧನಂಜಯ್, ಕೃಷಿ ಸಹಾಯಕ ನಿರ್ದೇಶಕ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.