ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ದಶಕದ ಬಳಿಕ ಮತ್ತೆ ನಕ್ಸಲ್ ಸದ್ದು:? ಇಬ್ಬರು ಶಂಕಿತ ವ್ಯಕ್ತಿಗಳ ಬಂಧನ; ನಾಡ ಬಂದೂಕು ವಶ
11/11/2024, 20:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದಶಕಗಳ ಬಳಿಕ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮತ್ತೆ ನಕ್ಸಲರ ಸದ್ದು ಕೇಳಲಾರಂಭಿಸಿದೆ. ಇಬ್ಬರು ಶಂಕಿತ ವ್ಯಕ್ತಿಗಳನ್ನು ನಕ್ಸಲ್ ನಿಗ್ರಹ ಪಡೆ (ಎಎನ್ ಎಫ್) ತೀವ್ರ ವಿಚಾರಣೆಗೊಳಪಡಿಸಿದ್ದು, ನಾಡ ಬಂದೂಕು ವಶಪಡಿಸಿಕೊಳ್ಳಲಾಗಿದೆ.
2014ರ ನಂತರ ಮಲೆನಾಡಲ್ಲಿ ಮೊದಲ ಬಾರಿಗೆ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಾರೆ.
ಮಲೆನಾಡಿಗೆ ಆವರಿಸಿದ ಒತ್ತುವರಿ ತೆರೆವು ಹಾಗೂ ಕಸ್ತೂರಿ ರಂಗನ್ ವರದಿ ಭಯದ ಹಿನ್ನೆಲೆಯಲ್ಲಿ ನಕ್ಸಲ್ ಚಟುವಟಿಕೆಗೆ ಮತ್ತೆ ಜೀವ ಬಂದಿದೆ ಎನ್ನಲಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಶಂಕಿತ ನಕ್ಸಲರು ಗ್ರಾಮಸ್ಥರ ಸಂಪರ್ಕ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ನಕ್ಸಲ್ ನಿಗ್ರಹ ಪಡೆ ಕೊಪ್ಪ ತಾಲೂಕಿನ ಗಡಿ ಭಾಗದ ಗ್ರಾಮದ ಈ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಕೊಪ್ಪ ತಾಲೂಕಿನ ಯಡಗುಂದ ಮೂಲದ ವ್ಯಕ್ತಿಗಳು ಇವರಾಗಿದ್ದಾರೆ. ಇಬ್ಬರಿಗೆ ಸಂಬಂಧಿಸಿದ ಸ್ಥಳದಲ್ಲಿ ಎಎನ್ ಎಫ್ ಟೀಂ ಶೋಧ ನಡೆಸಿದೆ. ನಾಡ ಬಂದೂಕು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ಇಬ್ಬರ ವಿಚಾರಣೆ ನಡೆಸಲಾಗಿದೆ. ನಕ್ಸಲ್ ನಿಗ್ರಹ ಪಡೆಯಿಂದ ಮಲೆನಾಡಲ್ಲಿ ತೀವ್ರ ಶೋಧ ಕಾರ್ಯ ಆರಂಭವಾಗಿದೆ. ಎಎನ್ ಎಫ್ ಎಸ್ಪಿ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.