2:00 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಜಲಮಾಲಿನ್ಯ ತಡೆಯಲು ತುಂಗಭದ್ರಾ ಅಭಿಯಾನ ಪಾದಯಾತ್ರೆ ಸಭೆಯಲ್ಲಿ ಹಕ್ಕೊತ್ತಾಯ

09/11/2024, 15:58

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info reporterkarnataka@gmail.com

ಮಲೆನಾಡಿನ ದಟ್ಟಾರಣ್ಯ ಪ್ರದೇಶದಲ್ಲಿ ಹರಿಯುವ ನದಿ, ಕಣಿವೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಜಲಮಾಲಿನ್ಯ ತಡೆಯಲು ಕೃಷಿ, ಕಾರ್ಖಾನೆ, ನಗರಾಭಿವೃದ್ಧಿ ಯೋಜನೆಗಳಲ್ಲಿ ಸುಸ್ಥಿರ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಸಭೆಯಲ್ಲಿ ಹಕ್ಕೊತ್ತಾಯ ವ್ಯಕ್ತವಾಯಿತು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ಶೃಂಗೇರಿಯಿಂದ ಹೊರಟಿರುವ ನಿರ್ಮಲ ತುಂಗಾಭದ್ರಾ ಅಭಿಯಾನ ಶುಕ್ರವಾರ ಭೀಮನಕಟ್ಟೆ ಮಾರ್ಗವಾಗಿ ತೀರ್ಥಹಳ್ಳಿ ಪಟ್ಟಣ ಪ್ರವೇಶಿಸಿತು.
ನಂತರ ಗ್ರಾಮೀಣ ಭವನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಪರಿಸರ ಹೋರಾಟಗಾರರು, ರಾಜಕೀಯ ಮುಖಂಡರು ಆಗ್ರಹಿಸಿದರು.
ಗಂಗಾ ಸ್ನಾನಂ-ತುಂಗಾ ಪಾನಂ ಎಂಬ ನಾಣ್ನುಡಿಗೆ ಅನ್ವರ್ಥವಾಗಿ ತುಂಗಾ ಕುಲುಷಿತಗೊಳ್ಳುತ್ತಿದೆ. ತುಂಗಭದ್ರೆಯಾದ ಬಳಿಕ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ನಗರ ಗ್ರಾಮಗಳ ತ್ಯಾಜ್ಯದ ನೀರು ಪ್ಲಾಸ್ಟಿಕ್ ಬಳಕೆ, ರೈತರ ಹೊಲಗದ್ದೆ, ತೋಟಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಮುಂದಿನ ಪೀಳಿಗೆಯ ಉಸಿರು ಕಸಿದುಕೊಳ್ಳಲಿದೆ ಎಂದು ಎಚ್ಚರಿಸಿದರು.


“ನದಿ ಕಣಿವೆ ಉಳಿಸುವ ಹೋರಾಟ 80ರ ದಶಕದಿಂದಲೂ ನಡೆಯುತ್ತಿದೆ. ಪಾರಂಪರಿಕ ಪದ್ಧತಿ ಅನುಸರಿಸದೆ ಮಾಡುತ್ತಿರುವ ಹೊಸ ಅಭಿವೃದ್ಧಿಗಳು ಪರಿಸರ ನಾಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಸಾವಯವ, ಅರಣ್ಯ ಕೃಷಿ ಪದ್ಧತಿಯ ಅವಲಂಬನೆ ಹೆಚ್ಚಾಗಬೇಕು. ಅಕ್ರಮ ಮರಳು, ಕ್ರಿಮಿನಾಶಕ ಬಳಕೆಗಳ ಬಗ್ಗೆ ಸರ್ಕಾರ ಸೂಕ್ಷವಾಗಿ ಗಮನಿಸಿ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹೆಚ್ಚು ಸಕ್ರೀಯವಾಗಿ ಕೆಲಸ ಮಾಡಬೇಕು” ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧಕ್ಷ ಅನಂತ ಹೆಗಡೆ ಆಶಿಸರ ಹೇಳಿದರು.
“ಪ್ರಮುಖ ನದಿಗಳು ಕಲುಷಿತಗೊಂಡರೆ ಸಾವು ಬದುಕಿನ ಪ್ರಶ್ನೆ ಸೃಷ್ಟಿಯಾಗಲಿದೆ. ಶೇಕಡಾ 60ರಷ್ಟು ಕಾಯಿಲೆಗಳು ನೀರಿನಿಂದ ಬರುತ್ತಿದೆ ಎಂದು ವಿಶ್ವಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಆಸ್ಪತ್ರೆ, ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಪರ್ಯಾಯ ವ್ಯವಸ್ಥೆ ರೂಪಿಸಬೇಕು. ಆರೋಗ್ಯ ಇಲ್ಲದ ಅಭಿವೃದ್ಧಿ ಯೋಜನೆಗಳನ್ನು ಮಾಡಿದರೆ ಪ್ರಯೋಜನವೇನು? ಬೇರೆಯವರನ್ನು ದೂಷಿಸುವ ಬದಲು ಪ್ರತಿಯೊಬ್ಬ ನಾಗರೀಕ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಶುದ್ದೀಕರಣ ವ್ಯವಸ್ಥೆ ಇಲ್ಲದೆ ನೇರವಾಗಿ ನೀರು ನದಿಗೆ ಹರಿಸಬಾರದು” ಎಂದು ಪರಿಸರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ ಮನವಿ ಮಾಡಿದರು.
“ಸ್ವಾರ್ಥಕ್ಕಾಗಿ ಪ್ರಕೃತಿ ಬಳಕೆ ಮಾಡಿಕೊಳ್ಳಬಾರದು. ವಿನಾಕಾರಣ ಪರಿಸರದ ಮೇಲೆ ಅತಿಕ್ರಮ ಮಾಡಿದರೆ ಪ್ರಕೃತಿ ಮಾನವ ಜಗತ್ತಿನ ಮೇಲೆ ಸೇಡು ತೀರಿಸಿಕೊಳ್ಳಲಿದೆ. ಪ್ರಕೃತಿಯನ್ನು ಪರಿಶುದ್ಧಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು. ಯುವಜನತೆ ನದಿ ಉಳಿವಿಗಾಗಿ ಸಾಮಾಜಿಕ ಜಾಲತಾಣವನ್ನು ಸಕ್ರೀಯವಾಗಿ ಬಳಕೆ ಮಾಡಬೇಕು” ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
“ನಿರ್ಮಲ ತುಂಗಾಭದ್ರ ನೀರು ಕುಡಿಯುವವರ ಪಾದಯಾತ್ರೆ. ಶುದ್ಧ ಕುಡಿಯುವ ನೀರು ನಮ್ಮಂತೆಯೇ ಮುಂದಿನ ಪೀಳಿಗೆಗೂ ಸಿಗಬೇಕು. ಎಲ್ಲಾ ಪ್ರಜೆಗಳು ಪರಿಸರ ಪ್ರಜ್ಞೆ ಬೆಳೆಸಿಕೊಂಡು ಜಲ ಮತ್ತು ಬದುಕಿನ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ಸಣ್ಣ ಯೋಚನೆ ಪರಿಸರದ ಮೇಲಾಗುವ ಬಹುದೊಡ್ಡ ಅನಾಹುತ ತಪ್ಪಿಸಲಿದೆ” ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
“ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರಮುಖವಾಗಿ ನಾಲ್ಕು ರಾಜಕಾಲುವೆಗಳಿವೆ. ಭೌಗೋಳಿಕ ಹಿನ್ನಲೆ ಅವಲೋಕಿಸಿದರೆ ಕೇವಲ ಒಂದು ಶುದ್ಧೀಕರಣ ಘಟಕ ಸ್ಥಾಪಿಸಲು ಸಾಧ್ಯವಿಲ್ಲ. 4 ಘಟಕಗಳನ್ನು ಮಾಡುವ ಅನಿವಾರ್ಯ ಇದೆ. ರಾಜ್ಯ ಸರ್ಕಾರದಿಂದ ಈಗಾಗಲೇ ₹30 ಕೋಟಿ ಅನುದಾನ ಜಲಶಕ್ತಿ ಶುದ್ಧೀಕರಣಕ್ಕೆ ನೀಡಿದ್ದು ಕ್ರಿಯಾಯೋಜನೆ ಸಿದ್ಧಪಡಿಸುತ್ತಿದ್ದೇವೆ” ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ ಹೇಳಿದರು.
ಸಭೆಯಲ್ಲಿ ಪಾದಯಾತ್ರೆಯ ಸಂಚಾಲಕ ಎಂ.ಶಂಕರ್, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್, ರತ್ನಾಕರ ಶೆಟ್ಟಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು