ಇತ್ತೀಚಿನ ಸುದ್ದಿ
ಹರಿಯಾಣದ ಫಲಿತಾಂಶ ನೋಡಿ ಕಾಂಗ್ರೆಸ್ ನಾಯಕರೆಲ್ಲರೂ ಮೂಲೆ ಸೇರಿದ್ದಾರೆ: ಆರಗ ಜ್ಞಾನೇಂದ್ರ
09/10/2024, 12:36

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅತ್ಯಂತ ಸಂತೋಷದ ಕ್ಷಣ, ಹರಿಯಾಣದಲ್ಲಿ ಮೂರನೇ ಬಾರಿಗೆ ಜನ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ದೇಶದಲ್ಲಿ ಬಿಜೆಪಿ ಸಂಘಟನೆ ಮತ್ತು ಶಕ್ತಿ ಏನಾಗಿದೆ ಎಂದು ಇಡೀ ಜಗತ್ತು ನೋಡುತ್ತಿದೆ. ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಗೆದ್ದೆ ಬಿಟ್ಟಿದ್ದೇವೆ ಎಂದು ಕಾಂಗ್ರೆಸ್ ಬೀಗುತ್ತಿತ್ತು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ಭಾರಿ ಭಾರಿ ಸಭೆ ನಡೆಸಿ ಟೀಕೆ ಮಾಡಿದ್ರು. ಆದರೆ ಅವರ ಕತ್ತಿ ಹರಿಯಲಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹರಿಯಾಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಕಂಡ ಕಾರಣಕ್ಕೆ ತೀರ್ಥಹಳ್ಳಿಯಲ್ಲಿ ವಿಜಯೋತ್ಸವ ನಡೆಸಿ ಮಾತನಾಡಿದ ಅವರು, ಫಲಿತಾಂಶ ನೋಡಿ ಕಾಂಗ್ರೆಸ್ ನಾಯಕರೆಲ್ಲರೂ ಮೂಲೆಗೆ ಹೋಗಿ ಕುಳಿತಿದ್ದಾರೆ. ಅವರ ಮುಖಂಡತ್ವಕ್ಕೆ ದೇಶದಲ್ಲಿ ಸ್ಥಾನ ಇಲ್ಲ ಎಂದು ತೋರಿಸಿದ್ದಾರೆ. ಸಮೀಕ್ಷೆ ನೋಡಿ ಕಾಂಗ್ರೆಸ್ ನಾಯಕರು ಬೀಗುತ್ತಿದ್ದರು. ಟನ್ ಗಟ್ಟಲೆ ಜಿಲೇಬಿ ತಂದು ಸಂಭ್ರಮಾಚರಣೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ಪಾರ್ಟಿ ಕಚೇರಿಯಲ್ಲಿ ಯಾರು ಇಲ್ಲ ಎಂದು ಕಿಚಾಯಿಸಿದರು.
ಎರಡು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ನವರ ಹಣೆ ಬರಹಕ್ಕೆ ಗೆಲುವಿನ ಹತ್ತಿರ ಕೂಡ ಬರಲು ಸಾಧ್ಯವಾಗಿಲ್ಲ. ಜಾತಿ ಹೇಳಿದ್ರಿ, ಅಲ್ಪಸಂಖ್ಯಾತರನ್ನು ದೇಶದಲ್ಲಿ ಎತ್ತು ಕಟ್ಟುತ್ತೀರಿ. ಆದರೆ ಯಾವುದು ಸಹ ವರ್ಕೌಟ್ ಆಗಿಲ್ಲ, ಅದೇ ಅಲ್ಪಸಂಖ್ಯಾತ ಬಂಧುಗಳು ಜಮ್ಮು ಕಾಶ್ಮೀರದಲ್ಲಿ ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ಆರರಿಂದ ಏಳು ಸೀಟುಗಳಿಗೆ ತಂದು ಕೂರಿಸಿದ್ದಾರೆ, ಜನ ಇವತ್ತು ದೇಶಕ್ಕೆ ಬಿಜೆಪಿ ಬೇಕು ಎಂದು ತೋರಿಸಿದ್ದಾರೆ ಎಂದರು .
ನರೇಂದ್ರ ಮೋದಿ ಹರಿಯಾಣದಲ್ಲಿ ಇಲ್ಲಿನ ಮುಡಾ ಪ್ರಕರಣ ವನ್ನು ಪ್ರಸ್ತಾಪ ಮಾಡುತ್ತಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು. ಆದರೆ ಅದು ವರ್ಕೌಟ್ ಆಯಿತು. ಕಾಂಗ್ರೆಸ್ ನವರಿಗೆ ಅಧಿಕಾರ ಕೊಟ್ಟರೆ ಭ್ರಷ್ಟಾಚಾರಕ್ಕೆ ಅನುಮತಿ ಕೊಟ್ಟಹಾಗೆ ಎಂದು ಜನರಿಗೆ ಗೊತ್ತಾಗಿದೆ. ಅಪರೂಪಕ್ಕೆ ರಾಜ್ಯದಲ್ಲಿ ಅಧಿಕಾರ ಕೊಟ್ಟರೆ ಮುಡಾ ಹಗರಣ ವಾಲ್ಮೀಕಿ ಹಗರಣದ ಜೊತೆಗೆ ಇನ್ನಷ್ಟು ಹಗರಣಗಳು ಹೊರ ಬರಬೇಕಿದೆ. ಇದನ್ನೆಲ್ಲಾ ನೋಡಿದ ಜನತೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂದು ತೀರ್ಮಾನ ಮಾಡಿದರು. ಜಮ್ಮು ಕಾಶ್ಮೀರದಲ್ಲಿ ವೋಟಿನಲ್ಲಿ ಗೆಲ್ಲದೆ ಇರಬಹುದು. ಅಲ್ಲಿನ ಪ್ರಜಾಪ್ರಭುತ್ವ ಗೆದ್ದಿದೆ ಭಾರತದ ಸಂವಿಧಾನ ಗೆದ್ದಿದೆ. ಭಾರತದ ಜೊತೆಗೆ ನಾವಿದ್ದೇವೆ ಎಂದು ಓಟಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಸಿದ್ದರಾಮಯ್ಯನವರು ಮುಟ್ಟಿ ನೋಡಿಕೊಳ್ಳಬೇಕು. ನಿಮ್ಮ ಮನೆಯ ಸಂಗತಿಗಳೆಲ್ಲವೂ ಅಲ್ಲಿ ಚರ್ಚೆಯಾಗಿತ್ತು. ಇವತ್ತು ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ. ದಿನಾ ದಿನಾ ಮೂಡ ವಾಲ್ಮೀಕಿ ಹಗರಣದಿಂದ ಹಗುರವಾಗುತ್ತಿದ್ದೀರಾ, ಮಣ್ಣು ಪಾಲಾಗುತ್ತಿದ್ದೀರಿ ದಿಕ್ಕಾ ಪಾಲಾಗುತ್ತಿದ್ದೀರಿ, ಹಾಗಾಗಿ ಮರ್ಯಾದೆಯಿಂದ ಗೌರವದಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ನವೀನ್ ಹೆದ್ದೂರು, ಸಂದೇಶ್ ಜವಳಿ, ನವೀನ್ ಯತಿರಾಜ್, ಕುಕ್ಕೆ ಪ್ರಶಾಂತ್, ಮಂಜುನಾಥ್ ಶೆಟ್ಟಿ, ಪ್ರಮೋದ್ ಪೂಜಾರಿ,ಅನೀಲ್ ಮಿಲ್ಕೇರಿ, ಮಹಾಂತೇಶ್,ನಂದನ್ ಹಸಿರುಮನೆ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.