ಇತ್ತೀಚಿನ ಸುದ್ದಿ
ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಿ ನೈಜ ಸುದ್ದಿ ಬಿತ್ತುವ ಕೆಲಸ ಮಾಡಿ: ಪತ್ರಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು
23/09/2024, 16:11
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಇತ್ತೀಚೆಗೆ ಸುಳ್ಳು ಸುದ್ದಿ ಬಹಳ ವೇಗವಾಗಿ ಹರಡುತ್ತಿದೆ. ಇದರಿಂದ ವ್ಯಕ್ತಿಗಳ ಹಾಗೂ ಸಮಾಜದ ತೇಜೋವಧೆಯಾಗುತ್ತದೆ. ಇದರಿಂದ ಯಾರಿಗೂ ಒಳ್ಳೆಯದಾಗದೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ಹಾಗೂ ಹರಡುವುದನ್ನು ತಪ್ಪಿಸಿ ನೈಜವಾದ ಸುದ್ದಿಗಳನ್ನು ಬಿತ್ತುವ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಣಸೂರು ರಸ್ತೆಯಲ್ಲಿರುವ ಮಾನಸ ಗಂಗೋತಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮಾತನಾಡಿ ಸಮಾಜದಲ್ಲಿ ಕೋಟಿ ಉಳ್ಳ ಪತ್ರಕರ್ತರು ಇದ್ದಾರೆ. ಒಂದು ಹೊತ್ತಿನ ರೋಟಿಗೂ ಇಲ್ಲದಂತಹ ಪತ್ರಕರ್ತರು ಇದ್ದಾರೆ. ಇಂದು ಸಮಾಜ ಉತ್ತಮ ಆರೋಗ್ಯವಾಗಿರಬೇಕಾದರೆ ಪತ್ರಕರ್ತರೂ ಕೂಡ ಆರೋಗ್ಯವಂತರಾಗಿರಬೇಕು. ಕೆಲ ಪತ್ರಕರ್ತರಿಗೆ ಆರೋಗ್ಯ ಪಡೆದುಕೊಳ್ಳುವ ಸ್ತಿತಿಯೂ ಇಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೆ ತರಬೇಕು. ಅಂತೆಯೇ ಬಹುದಿನದ ಬೇಡಿಕೆಯ ಬಸ್ ಪಾಸ್ ವಿತರಣೆಯೂ ಆಗಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭ ಸಿಎಂ ಸೇರಿದಂತೆ ವೇದಿಕೆ ಮೇಲಿನ ಗಣ್ಯರು ಹಿರಿಯ ಪತ್ರಕರ್ತರಿಗೆ ಅಭಿನಂದನೆ ಹಾಗೂ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ, ಶಾಸಕರುಗಳಾದ ತನ್ವೀರ್ ಸೇಠ್, ರವಿಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ನ್ಯೂಸ್ ಫಸ್ಟ್ ಕನ್ನಡ ಸಿ ಇ ಒ ರವಿಕುಮಾರ್, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಐನಕೈ, ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.