ಇತ್ತೀಚಿನ ಸುದ್ದಿ
ಪಾಲಿಕೆ ಸಭೆಯ ನುಂಗಿ ಹಾಕಿದ ಆಡಳಿತ- ಪ್ರತಿಪಕ್ಷ ಸದಸ್ಯರ ನಡುವಿನ ಮಾತಿನ ಚಕಮಕಿ
01/09/2024, 13:12
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಸದಸ್ಯರ ನಡುವೆ ತೀವ್ರ ವಾಕ್ಸಮರ ಇಡೀ ಸಭೆಯನ್ನೇ ಸ್ಥಗಿತಗೊಳಿಸಲು ಕಾರಣವಾದ ಘಟನೆ ಮಂಗಳೂರು ಮಹಾನಗರಪಾಲಿಕೆ ಸಭೆಯಲ್ಲಿ ನಡೆದಿದೆ.
ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವಿನ ಪರಸ್ಪರ ಮಾತಿನ ಚಕಮಕಿ ಸದನ ಗದ್ದಲಕ್ಕೆ ಒಳಗಾಗುವಂತೆ ಮಾಡಿತು. ಪ್ರತಿಪಕ್ಷ ಕಾಂಗ್ರೆಸ್ ನ ಸದಸ್ಯರೊಬ್ಬರು ಕಾರ್ಡ್‌ಲೆಸ್ ಮೈಕ್ ಆನ್ ಆಗದೇ ಇದ್ದಾಗ ಅದನ್ನು ನೆಲಕ್ಕೆ ಬಡಿದ ಘಟನೆಯೂ ನಡೆಯಿತು. ನಿಗದಿಯಂತೆ ಮಂಗಳಾ ಸಭಾಂಗಣದಲ್ಲಿ ಸಭೆ ಆರಂಭಗೊಂಡು ಮೇಯರ್ ಹಿಂದಿನ ಸಭೆಯ ನಡಾವಳಿಗಳನ್ನು ಸ್ಥಿರೀಕರಿಸುವ ಜೊತೆ ತಾವು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಹಾಗೂ ಸದಸ್ಯರು ಮೇಯರ್ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಆಕ್ಷೇಪಿಸಿ ಮೇಯರ್ ಪೀಠದೆದುರು ತೆರಳಿ ಮೇಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಆಡಳಿತ ಪಕ್ಷದ ಸದಸ್ಯೆ ಸಂಗೀತಾ ನಾಯಕ್ ಮಾತನಾಡಿದರು. ಬಸ್ಸಿಗೆ ಕಲ್ಲು ಹೊಡೆದು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿ ಎಫ್‌ಐಆರ್ ಹಾಕಿಸಿಕೊಂಡು ಜಾಮೀನಿನಲ್ಲಿರುವ ನಾಮನಿರ್ದೇಶಿತ ಸದಸ್ಯನಿಗೆ ಕಾಂಗ್ರೆಸ್ ಕಲಾಪದಲ್ಲಿ ಅವಕಾಶ ಕಲ್ಪಿಸಿದೆ. ಕಾಂಗ್ರೆಸ್ ಸದಸ್ಯರು ಗೂಂಡಾಗಿರಿ ಮಾಡಿದ್ದು, ಇಂಥವರು ಜನಪ್ರತಿನಿಧಿ ಆಗಲು ಅನರ್ಹರು ಎಂದು ಮುಖ್ಯ ಸಚೇತಕ ಪ್ರೇಮಾ ನಂದ ಶೆಟ್ಟಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯ ರೆಲ್ಲರೂ ಆಗ್ರಹಿಸಿದರು. ಆ ಸದಸ್ಯನನ್ನು ಸದನದಿಂದ ಹೊರಕಳುಹಿಸಬೇಕೆಂದು ಆಗ್ರಹಿಸಿ ಧಿಕ್ಕಾರ ಕೂಗಿದರು. ಈ ನಡುವೆ ಪ್ರತಿಪಕ್ಷ ಸದಸ್ಯರು ಮೇಯರ್ ಗೆ ಧಿಕ್ಕಾರ ಕೂಗಿದರು.
ಕಾಂಗ್ರೆಸ್ ಜನಪ್ರತಿನಿಧಿಗಳು ಬಸ್ಸಿಗೆ ಕಲ್ಲೆಸೆಯುವುದು, ಮೈಕ್ ಕಿತ್ತೆಸೆಯುವ ಕೃತ್ಯ ಮೂಲಕ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದೆ ಎಂದು ಆರೋಪಿಸಿದ ಮೇಯರ್ ಸುಧೀರ್ ಶೆಟ್ಟಿ ಅವರು, ಕೆಲ ಹೊತ್ತು ಸಭೆಯಲ್ಲಿ ಗದ್ದಲ ಸೃಷ್ಟಿ ಆದಾಗ ಸಭೆಯನ್ನು ಮೊಟಕು ಗೊಳಿಸಿದರು. ಸುಮಾರು ಅರ್ಧ ಗಂಟೆ ಬಳಿಕ ಮತ್ತೆ ಸಭೆ ಅರಭಿಸಲಾಯಿತು.
ಪ್ರತಿಪಕ್ಷ ಸದಸ್ಯರು ಮತ್ತೆ ಮೇಯರ್ ಪೀಠದ ಎದುರು ಧರಣಿ ಕುಳಿತರು. ಆಡಳಿತ ಪಕ್ಷದ ಸದಸ್ಯರು ಭಿತ್ತಿ ಪತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಪ್ರತಿಪಕ್ಷ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದಾಗ ಮತ್ತೆ ಸದನದಲ್ಲಿ ಗದ್ದಲ ಉಂಟಾಯಿತು. ಈ ಸಂಧರ್ಭ ಮೇಯರ್ ಸಭೆಯನ್ನು ಸ್ಥಗಿತ ಗೊಳಿಸಿ ಕಾರ್ಯಸೂಚಿ ಮಂಡಿಸಲು ಅವಕಾಶ ನೀಡಿದರು. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಕಾರ್ಯಸೂಚಿಗಳನ್ನು ಅಂಗೀಕಾರ ಮಾಡಲಾಯಿತು.