ಇತ್ತೀಚಿನ ಸುದ್ದಿ
ಮುಜರಾಯಿ ಇಲಾಖೆಯ ಅನುದಾನ; 95 ಲಕ್ಷ ರೂ. ವೆಚ್ಚದಲ್ಲಿ ಬಳ್ಳಾರಿ ನಗರದ ವಿವಿಧ ದೇವಸ್ಥಾನಗಳ ಅಭಿವೃದ್ಧಿ: ಶಾಸಕ ನಾರಾ ಭರತ್ ರೆಡ್ಡಿ
13/08/2024, 15:27
ಗಣೇಶ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿಯ ಕೆಹೆಚ್ ಬಿ ಕಾಲೋನಿಯ ಶ್ರೀ ಸಣ್ಣ ದುರ್ಗಮ್ಮ ದೇವಸ್ಥಾನ ನಿರ್ಮಾಣದ ಬಾಕಿ ಉಳಿದಿರುವ ಕಾಮಗಾರಿಯನ್ನು ಅಂದಾಜು 5 ಲಕ್ಷ ರೂ.ಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿಯ ಗಾಂಧಿ ನಗರದ ಕೆಹೆಚ್ ಬಿ ಕಾಲೋನಿಯ ಕೆರೆಯ ಬಳಿ ಇರುವ ಶ್ರೀ ಸಣ್ಣ ದುರ್ಗಮ್ಮ ದೇವಸ್ಥಾನದ ಬಳಿ ನಡೆದ ವಾರ್ಡಿನ ಜನರನ್ನುದ್ಧೇಶಿಸಿ ಅವರು ಮಾತನಾಡಿದರು. ಇದಕ್ಕೂ ಮುನ್ನ ನಗರದ 16ನೇ ವಾರ್ಡ್ ಹಾಗೂ 3ನೇ ವಾರ್ಡಿಗೆ ಭೇಟಿ ನೀಡಿ 16ನೇ ವಾರ್ಡಿನ ಶ್ರೀ ಪಾಂಡುರಂಗ ದೇವಸ್ಥಾನ ಹಾಗೂ ಶ್ರೀ ರಾಮ ದೇವಸ್ಥಾನಗಳಿಗೆ ಹಿಂದೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯಿಂದ ತಲಾ 20 ಲಕ್ಷ ರೂ.ಗಳು ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ವಾರ್ಡಿನ ಹಿರಿಯರು ಹಾಜರಿದ್ದರು.
ಅದೇ ರೀತಿ 3ನೇ ವಾರ್ಡಿನ ಶ್ರೀ ರಾಧಾಕೃಷ್ಣ ದೇವಸ್ಥಾನಕ್ಕೆ 50 ಲಕ್ಷ ರೂ.ಗಳು ಮಂಜೂರಾಗಿದ್ದು, ಶೀಘ್ರ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು.
ಅರ್ಧಕ್ಕೆ ನಿಂತಿರುವ 22ನೇ ವಾರ್ಡಿನ ಶ್ರೀ ಸಣ್ಣ ದುರ್ಗಮ್ಮ ದೇವಸ್ಥಾನದ ಗೋಪುರ ಕೆಲಸವನ್ನು ನಾನು ಪೂರ್ಣಗೊಳಿಸುವೆ. ಗೋಪುರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಮುಜರಾಯಿ ಇಲಾಖೆಯಿಂದ ಈಗಾಗಲೇ ಮಂಜೂರಾಗಿದ್ದು, ಆದಷ್ಟು ಬೇಗ ದೇವಸ್ಥಾನ ಪೂರ್ಣಗೊಳಿಸೋಣ ಎಂದರು.
22ನೇ ವಾರ್ಡಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ ಸ್ಥಳೀಯ ಮುಖಂಡರಾದ ಬಜ್ಜಪ್ಪ ಹಾಗೂ ದುರ್ಗಾ ಮೋಹನ್ ಅವರಿಗೆ ತಿಳಿಸಿ ಎಂದು ಹೇಳಿದ ಶಾಸಕ ಭರತ್ ರೆಡ್ಡಿ, ವಾರ್ಡಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಾನು ಬದ್ಧ ಎಂದರು.
ಈ ವೇಳೆ ಶ್ರೀ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ರಾಂಪ್ರಸಾದ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಬಜ್ಜಪ್ಪ, ದುರ್ಗಾ ಮೋಹನ್ ಮತ್ತಿತರರು ಹಾಜರಿದ್ದರು.