6:57 PM Tuesday4 - November 2025
ಬ್ರೇಕಿಂಗ್ ನ್ಯೂಸ್
ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ…

ಇತ್ತೀಚಿನ ಸುದ್ದಿ

10 ಮಂದಿಯ ಬಲಿ ಪಡೆದ ಮಲೆನಾಡ ಭೂ- ಜಲಸ್ಫೋಟಕ್ಕೆ 5 ವರ್ಷ: ಬೆಟ್ಟ ಕುಸಿತದಿಂದ ಮಣ್ಣಿನಡಿಗೆ ಸಿಲುಕಿದ್ದ ಮಲೆಮನೆ, ಮಧುಗುಂಡಿ, ದುರ್ಗದಹಳ್ಳಿ

09/08/2024, 23:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆ ಎನಿಸಿದ್ದ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಗಡೆಯವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಆಗಿನ್ನು ಎಂಟತ್ತು ದಿನಗಳಾಗಿತ್ತು. ಜಿಲ್ಲೆಯ ಜನ ಇನ್ನೂ ಆ ನೋವಿನ ಗುಂಗುನಿಂದ ಹೊರಬಂದಿರಲಿಲ್ಲ. ಅದಾಗಲೇ ಪ್ರಕೃತಿ ಮತ್ತೊಂದು ಮಹಾದುರಂತಕ್ಕೆ ಅಣಿಯಾಗಿತ್ತು.
ಅಂದು 2019 ಆಗಸ್ಟ್ 9ರ ಶುಕ್ರವಾರ ಮಧ್ಯಾಹ್ನದ ಹೊತ್ತು. ಸುಮಾರು ಮೂರ್ನಾಲ್ಕು ಗಂಟೆಗಳ ಅವಧಿಯಲ್ಲಿ ಪಶ್ಚಿಮ ಘಟ್ಟದ ನಿರ್ದಿಷ್ಟ ಪ್ರದೇಶಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ಪ್ರಳಯಾಂತಕ ಮಳೆ ಸುರಿದಿತ್ತು. ಜನ ಜಲಪ್ರಳಯವೇ ಆಗುತ್ತಿದೆ ಎಂದು ಜನ ಭಯಬೀತರಾಗಿದ್ದರು. ಎಲ್ಲೆಂದರಲ್ಲಿ ನೀರು ಉಕ್ಕಿ ಹರಿಯತೊಡಗಿತ್ತು. ಜನ ನೋಡನೋಡುತ್ತಿದ್ದಂತೆ ಬೆಟ್ಟಗುಡ್ಡಗಳು ಜಾರಿ ಬರತೊಡಗಿದವು. ಬೆಟ್ಟದ ತುದಿಯಿಂದ ನೀರಿನ ಝರಿಗಳು ಪ್ರಾರಂಭವಾಗಿ ಕಲ್ಲು-ಮಣ್ಣು, ಮರ-ಗಿಡ ಸಮೇತ ಕೆಳಗೆ ಹರಿದು ಬರತೊಡಗಿತು. ಎಲ್ಲೆಲ್ಲೂ ಕೆಸರು ಮಣ್ಣು ತುಂಬಿಕೊಂಡಿತು. ಸಣ್ಣ ಸಣ್ಣಗೆ ಹರಿಯುತ್ತಿದ್ದ ತೊರೆಗಳೆಲ್ಲಾ ದೊಡ್ಡ ಕೆಸರಿನ ಹೊಳೆಗಳಾಗಿ ಪರಿವರ್ತನೆಯಾದವು.
ವಿಶೇಷವಾಗಿ ಮೂಡಿಗೆರೆ ತಾಲೂಕು ಕಂಡು ಕೇಳರಿಯದ ರಣಮಳೆಯಿಂದ ನಲುಗಿ ಹೋಗಿತ್ತು. ಬಾಳೂರು, ಕಳಸ, ಬಣಕಲ್ ಹೋಬಳಿಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಶತಮಾನಗಳಿಂದ ಅದೆಷ್ಟು ಮಳೆಯನ್ನು, ಅದೆಂತಾ ರಣಭೀಕರ ಅತಿವೃಷ್ಟಿಯನ್ನು ಕಂಡಿಲ್ಲ ಇಲ್ಲಿಯ ಜನ. ಎಂತಹ ಮಳೆಗೂ ಜಗ್ಗದೇ, ಕುಗ್ಗದೇ ಇದ್ದ ಇಲ್ಲಿನ ಭೂಮಿ ಅಂದಿನ ಮಹಾಮಳೆಗೆ ಅಕ್ಷರಶಃ ಕರಗಿ ನೀರಾಗಿ ಹೋಗಿತ್ತು. ಮನೆಯ ಮೇಲಿನಿಂದ ಕೆಸರಿನ ಹೊಳೆಯಂತೆ ಹರಿದು ಬಂದ ಗುಡ್ಡದ ಮಣ್ಣು ಇಲ್ಲಿನ ಹತ್ತಾರು ಮನೆಗಳನ್ನು ತನ್ನಡಿಯಲ್ಲಿ ಹುದುಗಿಸಿಕೊಂಡಿತು. ಅದೆಷ್ಟೋ ಮನೆಗಳ ತಳಪಾಯವೇ ಕುಸಿದು ಕೆಳಗೆ ಜಾರಿದ್ದವು. ಮತ್ತಷ್ಟು ಮನೆಗಳ ಒಳಗೆ ನೀರಿನ ಒರತೆ ಹೊರಡತೊಡಗಿತ್ತು. ಬಹಳಷ್ಟು ಮನೆಗಳ ಗೋಡೆಗಳು ಕುಸಿದು ಜಾರಿದ್ದವು. ಮತ್ತಷ್ಟು ಮನೆಗಳ ಅಂಗಳವೆಲ್ಲಾ ಕೆಸರಗದ್ದೆಗಳಂತಾಗಿದ್ದವು. ಕೇವಲ ಮೂರ್ನಾಲ್ಕು ಗಂಟೆಗಳ ಮಹಾಮಳೆ ಮಲೆನಾಡಿನ ಒಂದು ಭಾಗವನ್ನು ಸಂಪೂರ್ಣ ಆಯೋಮಯವನ್ನಾಗಿಸಿತ್ತು.
ಅಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತು ಗುಡ್ಡ ಕುಸಿತಕ್ಕೆ 10 ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಜನರ ಬದುಕು ಅತಂತ್ರವಾಗಿತ್ತು. ಬಾಳೂರು ಹೋಬಳಿಯ ಮಲೆಮನೆ, ಮಧುಗುಂಡಿ, ದುರ್ಗದಹಳ್ಳಿ, ಕಳಸ ತಾಲ್ಲೂಕಿನ ಅನೇಕ ಗ್ರಾಮಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದವು.
ಮಹಾಮಳೆ ಹಾಗೂ ಗುಡ್ಡಕುಸಿತದಿಂದ ಮಲೆನಾಡಿನ ಬಹುತೇಕ ರಸ್ತೆಗಳು ಅಸ್ತವ್ಯಸ್ತವಾಗಿದ್ದವು. ಬಾಳೂರು ಮತ್ತು ಕಳಸ ಹೋಬಳಿ ವ್ಯಾಪ್ತಿಯಲ್ಲಿ ಯಾವೊಂದು ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿ ಉಳಿದಿರಲಿಲ್ಲ. ಎಲ್ಲಾ ರಸ್ತೆಗಳ ಮೇಲೆ ಗುಡ್ಡ ಕುಸಿದಿರುವುದು ಒಂದು ಕಡೆಯಾದರೇ ರಸ್ತೆಗಳೇ ಕುಸಿದು ಕೆಳಕ್ಕೆ ಜಾರಿರುವುದು, ಸೇತುವೆಗಳು, ಮೋರಿಗಳು ಮುರಿದು ಹೋಗಿರುವುದು, ರಸ್ತೆಗಳಿಗೆ ಮರಗಳು ಅಡ್ಡಬಿದ್ದಿರುವುದು, ಡಾಂಬಾರು ಕಿತ್ತು ಹೋಗಿರುವುದು, ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಹೊಂಡಗಳಾಗಿರುವುದು ಹೀಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ರಸ್ತೆಗಳು ಛಿದ್ರವಾಗಿ ಹೋಗಿದ್ದವು.

ಮಲೆಮನೆ ಎಂಬ ಊರೇ ಕೆಸರಿನಲ್ಲಿ ಮುಳುಗಡೆಯಾಗಿತ್ತು
ಅದೊಂದು ಪುಟ್ಟ ಗ್ರಾಮ. ಸುಮಾರು ಏಳೆಂಟು ಮನೆಗಳಿದ್ದ ಈ ಊರಿನ ಹೆಸರು ಮಲೆಮನೆ. ಹೆಸರೇ ಸೂಚಿಸುವಂತೆ ಇದು ಪಶ್ಚಿಮ ಘಟ್ಟದ ಮಲೆ(ಬೆಟ್ಟ)ಗಳ ತಡಿಯಲ್ಲಿ ತಣ್ಣಗೆ ಇದ್ದ ಒಂದು ಹಳ್ಳಿ. ಅಲ್ಲಿದ್ದ ಎಲ್ಲಾ ಕುಟುಂಬಗಳು ಕಾಫಿ, ಅಡಿಕೆ, ಭತ್ತದ ಗದ್ದೆಗಳನ್ನು ಮಾಡಿಕೊಂಡು ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದವರು. ಅವತ್ತು ಗ್ರಾಮದ ಬಹುತೇಕರು ವೈಕುಂಠ ಸಮಾರಾಧನೆಗೆಂದು ಸಮೀಪದ ಬಣಕಲ್ ಗ್ರಾಮಕ್ಕೆ ಹೋಗಿದ್ದರು. ಊರಿನಲ್ಲಿ ಐದಾರು ಮಹಿಳೆಯರಷ್ಟೇ ಉಳಿದುಕೊಂಡಿದ್ದರು.

ವೈಕುಂಠ ಸಮಾರಾಧನೆಗೆ ಹೋದವರು ಊರಿಗೆ ಹಿಂತಿರುಗುವ ಹೊತ್ತಿಗಾಗಲೇ ತಮ್ಮ ಮಲೆಮನೆ ಗ್ರಾಮದ ಹಿನ್ನೆಲೆಯಲ್ಲಿ ಇದ್ದ ಗುಡ್ಡವೊಂದು ಕುಸಿದು ಜಾರಿ ಗ್ರಾಮವನ್ನು ಬಹುತೇಕ ನಿರ್ನಾಮ ಮಾಡಿತ್ತು. ಗ್ರಾಮಕ್ಕೆ ಹೋಗುವಾಗ ಸಿಗುವ ಚಿಕ್ಕ ಹಳ್ಳವೊಂದು ರೌದ್ರಾವತಾರ ತೆಳೆದು ಹರಿಯತೊಡಗಿತ್ತು. ಬಣಕಲ್ ಗ್ರಾಮಕ್ಕೆ ಹೋಗಿದ್ದ ಗ್ರಾಮಸ್ಥರು ಮರಳಿ ತಮ್ಮ ಮಲೆಮನೆ ಊರಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಅವರೆಲ್ಲಾ ಕೊಟ್ಟಿಗೆಹಾರದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು. ಅಲ್ಲಿಂದ ಮುಂದಕ್ಕೆ ರಸ್ತೆ ಸಂಚಾರವೇ ಅಸಾಧ್ಯವಾಗಿತ್ತು.

ಗ್ರಾಮದ ಮೇಲೆ ಬೆಟ್ಟದಲ್ಲಿ ಇದ್ದ ಕಾಫಿ ಎಸ್ಟೇಟ್ ಒಂದರಿಂದ ಮರಗಿಡಗಳು, ಟಿಂಬರ್ ಕಡಿದಿಟ್ಟಿದ್ದ ಮರದ ತುಂಡುಗಳು, ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಗ್ರಾಮದಲ್ಲಿ ಹರಿದು ನಿಂತಿದ್ದವು. ವಿಹಾನ್ ಎಂಬ ಬಾಲಕನನ್ನು ಪಕ್ಕದ ಊರಿನ ಯುವಕರು ಹೇಗೋ ಕಷ್ಟಪಟ್ಟು ಹೊಳೆಯಿಂದ ಹೊರಗೆ ಕರೆತಂದರು. ಹೊರಬರಲಾಗದ ಮಹಿಳೆಯವರು ಎರಡು ಮನೆಗಳ ಮಾಳಿಗೆಯಲ್ಲಿ ಸೇರಿಕೊಂಡು ರಾತ್ರಿಯಿಡೀ ಜೀವ ಕೈಲಿಡುದು ಕಾಲ ಕಳೆದಿದ್ದರು. ಮರುದಿನ ಬೆಳಿಗ್ಗೆ ಸುತ್ತಲ ಗ್ರಾಮದ ಯುವಕರು ಸಾಹಸ ಮೆರೆದು ಅವರನ್ನು ಊರಿನಿಂದ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು.

ಆಪತ್ಭಾಂಧವ ಯೋಧರ ಪಡೆ
ಮಲೆನಾಡು ಭಾಗದಲ್ಲಿ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿದ್ದ ಜನರನ್ನು ಹೊರತರುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ(ಎನ್.ಡಿ.ಆರ್.ಎಫ್)ಯ ಯೋಧರು ನಿರ್ಣಾಯಕ ಪಾತ್ರ ವಹಿಸಿದರು. ಆಲೇಕಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ ಸುತ್ತಮುತ್ತ ಜನರು ಗುಡ್ಡ ಮತ್ತು ರಸ್ತೆಗಳ ಕುಸಿತದಿಂದ ಹೊರಪ್ರಪಂಚದ ಸಂಪರ್ಕ ಕಳೆದುಕೊಂಡಿದ್ದರು. ಮನೆಗಳು ಕುಸಿಯುತ್ತಿದ್ದರಿಂದ ಎಲ್ಲೆಂದರಲ್ಲಿ ಆಶ್ರಯ ಪಡೆದಿದ್ದರು. ದುರ್ಗಮವಾದ ಹಾದಿಯಲ್ಲಿ ಅವರನ್ನು ಹೊರತರುವುದು ಒಂದು ಹರಸಾಹಸದ ಕೆಲಸವಾಗಿತ್ತು. ಅಂತಹ ಸ್ಥಿತಿಯಲ್ಲಿ ನಮ್ಮ ಯೋಧರು ಸಾಹಸ ಮೆರೆದು ಜನರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾದರು. ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸಿದರು. ಯೋಧರ ಸಕಾಲಿಕ ಕಾರ್ಯದಿಂದ ಅದೆಷ್ಟೋ ಜೀವಗಳು ಉಳಿದವು.


ನೆರವಿಗೆ ಬಂಧ ಸಂಘ ಸಂಸ್ಥೆಗಳು : ಸಾಹಸ ಮೆರೆದ ನಮ್ಮುಡುಗ್ರು
ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗೊತ್ತಾದ ತಕ್ಷಣ ಎಲ್ಲಾ ಸಂಘಸಂಸ್ಥೆಗಳು ಅಭೂತಪೂರ್ವವಾಗಿ ಸ್ಪಂದಿಸಿ ಜನರನ್ನು ರಕ್ಷಿಸುವಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಗಸ್ಟ್ 9 ರಂದು ಸಂಜೆಯ ಹೊತ್ತಿಗೆ ಜನರು ತೊಂದರೆಗೆ ಸಿಲುಕಿರುವ ವಿಚಾರ ಎಲ್ಲಾ ಕಡೆ ಪ್ರಚಾರವಾಗತೊಡಗಿದೆ. ಆದರೆ ಅಲ್ಲಿಗೆ ತಲುಪುವ ರಸ್ತೆಗಳೆಲ್ಲಾ ಬಂದ್ ಆಗಿದ್ದರಿಂದ ಅಷ್ಟು ಸುಲಭವಾಗಿ ಭೂಕುಸಿತಕ್ಕೆ ಸಿಲುಕಿದ್ದ ಗ್ರಾಮಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಆದರೂ ಯುವಕರು ತಂಡೋಪತಂಡವಾಗಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಎಲ್ಲಾ ಸಂಘ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದವಾದರೂ ನಮ್ಮುಡುಗ್ರು ವಾಟ್ಸಾಪ್ ಬಳಗದ ಯುವಕರು ವಾಟ್ಸಾಪ್ ಗ್ರೂಪ್ ಅನ್ನೇ ವಾಕಿಟಾಕಿ ತರಹ ಬಳಸಿಕೊಂಡು ಧ್ವನಿಸಂದೇಶಗಳ ಮೂಲಕ ಎಲ್ಲೆಲ್ಲಿ ಜನರು ಸಂಕಟಕ್ಕೆ ಸಿಲುಕಿದ್ದಾರೆ. ಯಾರು ಎಲ್ಲಿ ಇದ್ದಾರೆ, ಎಲ್ಲಿಗೆ ಹೋಗಬೇಕು ಮುಂತಾದ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಅನೇಕ ಕುಗ್ರಾಮಗಳಿಗೆ ತಲುಪಿ ಜನರನ್ನು ರಕ್ಷಣೆ ಮಾಡುವುದರಲ್ಲಿ ಶ್ರಮ ವಹಿಸಿದ್ದರು. ಹಾಗೆಯೇ ಬಣಕಲ್ ಫ್ರೆಂಡ್ಸ್ ಬಳಗದವರು, ಸಂಘಪರಿವಾರದ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಲ್ಲರೂ ಜನರ ನೆರವಿಗೆ ಬಂದು ಹೆಚ್ಚಿನ ಪ್ರಾಣಹಾನಿಯಾಗುವುದನ್ನು ತಪ್ಪಿಸಿದರು.

ಹರಿದು ಬಂದ ನೆರವಿನ ಮಹಾಪೂರ

ಸರ್ಕಾರವು ಅನೇಕ ಕಡೆ ನಿರಾಶ್ರಿತರ ಶಿಬಿರಗಳನ್ನು ಮಾಡಿ ಜನರಿಗೆ ತಾತ್ಕಾಲಿಕ ನೆಲೆಯನ್ನು ಒದಗಿಸಿತ್ತು. ಮಲೆನಾಡಿನ ಜನರ ಸಂಕಷ್ಟವನ್ನು ಅರಿತು ನಾಡಿನ ಮೂಲೆ ಮೂಲೆಯಿಂದ ಜನ ಸ್ಪಂದಿಸಿ ಅಪಾರ ಪ್ರಮಾಣದಲ್ಲಿ ಆಹಾರಧಾನ್ಯ, ದಿನಸಿ, ಬಟ್ಟೆ ಮುಂತಾದ ಮೂಲ ಅವಶ್ಯಕ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದರು. ಕ್ರಮೇಣ ರಸ್ತೆ ಸಂಚಾರ, ಜನಜೀವನ ಸಾಮಾನ್ಯ ಸ್ಥಿತಿಗೆ ತಲುಪಿತ್ತು.

ಮರೀಚಿಕೆಯಾಗಿಯೇ ಉಳಿದಿರುವ ಪುನರ್ವಸತಿ
ಮಹಾಮಳೆಯಲ್ಲಿ ಮನೆ ಜಮೀನು ಕಳೆದುಕೊಂಡವರಲ್ಲಿ ಅನೇಕರಿಗೆ ಇನ್ನೂ ಸರ್ಕಾರ ಪುನರ್ವಸತಿ ನೀಡಲು ಸಾಧ್ಯವಾಗಿಲ್ಲ. ಮಲೆಮನೆ, ಮಧುಗುಂಡಿ ಗ್ರಾಮಗಳ ಜನರು ಕಳೆದ ಐದು ವರ್ಷಗಳಿಂದ ಪರ್ಯಾಯ ಭೂಮಿಗಾಗಿ ಅಲೆದಾಡುತ್ತಲೇ ಇದ್ದಾರೆ. ಆದರೆ ಅವರಿಗೆ ಸೂಕ್ತ ನೆಲೆ ಒದಗಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.  ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುತುವರ್ಜಿ ವಹಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು