ಇತ್ತೀಚಿನ ಸುದ್ದಿ
ಮೊನ್ನೆವರೆಗೆ ಎರಡು ಜಡೆ ಹಾಕುತ್ತಿದ್ದ ಆ ಹುಡ್ಗಿಗೆ ಜೀನ್ಸ್, ಟೀಶರ್ಟ್ ಬೇಕಂತೆ!; ಚಪ್ಪಲಿಗೆ ಎರಡಿಂಚು ಹೀಲ್ಸ್ ಬೇರೆ !!
02/08/2024, 19:38
ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಜನಿಸಿದ ರಾಜೇಶ್ವರಿ ಕುಮಾರ್ ರಾವ್ ಅವರು ಹವ್ಯಾಸಿ ಬರಹಗಾರ್ತಿ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಮಾರು 40 ವರ್ಷಗಳಿಂದ ಅವರ ಕಥೆಗಳು ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ‘ಹೊಸಬೆಳಕು’ ಅವರ ಚೊಚ್ಚಲ ಕಥಾಸಂಕಲನ. ಎಂ. ಎ. ಬಿಎಡ್ ಮಾಡಿದ ಅವರು ಸುಮಾರು 30 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಪೂರೈಸಿ ಈಗಲೂ ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಬರವಣಿಗೆಯ ಹವ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಅವರ ‘ಹೇಳಲೇ ಗೆಳತಿ…?!!’ ಅಂಕಣ ಪ್ರತಿ ತಿಂಗಳ ಮೊದಲ ಮತ್ತು ಕೊನೆಯ ಭಾನುವಾರ ರಿಪೋರ್ಟರ್ ಕರ್ನಾಟಕದಲ್ಲಿ ಪ್ರಕಟವಾಗಲಿದೆ.
– ಸಂ
ರಾಜೇಶ್ವರಿ ಕುಮಾರ್ ರಾವ್
info.reporterkarnataka@gmail.com
ಕಾಲೇಜು ಆರಂಭವಾಗಲು ಇನ್ನೂ ಒಂದು ತಿಂಗಳಿರುವಾಗಲೇ ರೂಪಾಳ ತಯಾರಿ ಬಿರುಸಿನಿಂದ ಶುರುವಾಯಿತು.
ಉದ್ದ ಕೂದಲನ್ನು ಎರಡು ಜಡೆಕಟ್ಟಿ, ಯುನಿಫಾರ್ಮ್ ಹಾಕಿ, ಬ್ಯಾಗಿನಲ್ಲಿ ರಾಶಿ ಪುಸ್ತಕಗಳ ಹೊರೆಹೊತ್ತು ಹೈಸ್ಕೂಲಿಗೆ ಹೋಗುತ್ತಿದ್ದವಳಿಗೆ, ಈಗ ಎಲ್ಲಿಲ್ಲದ ಸಂಭ್ರಮ. ಶಾಲಾ ಯುನಿಫಾರ್ಮ್ ಗಳನ್ನು ಎತ್ತಿ ಗಂಟುಮೂಟೆ ಕಟ್ಟಿ ಅಟ್ಟಕ್ಕೆ ಎಸೆದಿದ್ದೂ ಆಯ್ತು.
ಅಮ್ಮನ ಜೊತೆಗೆ ಶಾಪಿಂಗ್ ಗೆ ಹೋದವಳು ಮುಖ ಊದಿಸಿ ಕೊಂಡು ಬರಿಗೈಯಲ್ಲಿ ಬಂದಿದ್ದು ಕಂಡ ನಾನು, ಸಂಜೆ ಬಾಗಿಲಲ್ಲಿ ನಿಂತಿದ್ದ ರೂಪಾಳನ್ನು ಕರೆದೆ.
“ಯಾಕೆ ಪುಟ್ಟಾ, ಸಪ್ಪಗಿದ್ದೀ? ಬಟ್ಟೆ ಖರೀದಿಗೆ ಹೋದವಳು
ಖಾಲಿ ಕೈಯಲ್ಲಿ ಬಂದಿದ್ದೀ? ಏನು ಸಮಾಚಾರ?”
ಆಕೆ ಬಾಗಿಲು ಮುಚ್ಚಿ, ನಮ್ಮ ಮನೆಗೆ ಬಂದಳು. ಮುಖ ದುಮುಗುಟ್ಟುತ್ತಿತ್ತು. ತಾಯಿ ಮಗಳ ನಡುವೆ ಏನೋ ಚಕಮಕಿ ನಡೆದಿರಬಹುದೆಂದು ಊಹಿಸಿ ನಗು ಬಂತು.
ಹೆಗಲು ಬಳಸಿ ಒಳಕರೆದು ಸೋಫಾದ ಮೇಲೆ ಕೂರಿಸಿದೆ.
ಸ್ವಲ್ಪ ಹೊತ್ತಿನ ನಂತರ ಬಾಯಿಬಿಟ್ಟಳು ಹುಡುಗಿ.”ಆಂಟಿ, ಅಪ್ಪ ನಿನಗಿಷ್ಟವಾದ ಡ್ರೆಸ್ ತೆಗೆದುಕೋ ಎಂದು ದುಡ್ಡು ಕೊಟ್ಟಿದ್ದಾರೆ.
ಈ ಅಮ್ಮ ನನಗೆ ಬೇಕಾದ ಡ್ರೆಸ್ ತೆಗೆದುಕೊಳ್ಳಲು ಬಿಡುತ್ತಿಲ್ಲ. ಚೂಡಿದಾರ್, ಲಂಗ ಬ್ಲೌಸ್, ಮಾತ್ರ ತಗೋಬೇಕಂತೆ, ಅದೂ ಟೈಟ್ ಆಗಿರಬಾರದು.ಬಟ್ಟೆ ತಗೊಂಡು ಹೊಲಿಸ್ಕೋಬೇಕಂತೆ. ನನಗೆ ಸಿಟ್ಟು ಬಂತು. ಏನೂ ಬೇಕಾಗಿಲ್ಲ ಎಂದು ಬಂದುಬಿಟ್ಟೆ” ಎಂದಳು. ನಗು ಬಂದರೂ ತಡೆದುಕೊಂಡು ಚಾಕಲೇಟ್ ಬಾರ್ ಕೊಟ್ಟು ಪಕ್ಕದಲ್ಲಿ ಕುಳಿತೆ.
“ಹೋಗ್ಲಿ ಬಿಡು, ಭಾನುವಾರ ನನ್ನ ಮಗಳು ಶ್ವೇತಾ ಬರುತ್ತಾಳೆ. ಅವಳ ಜೊತೆಗೆ ಹೋಗಿ ನಿನಗೆ ಬೇಕಾದ ಡ್ರೆಸ್ ತೆಗೆದುಕೋ. ನಿನ್ನಮ್ಮನನ್ನು ನಾನು ಒಪ್ಪಿಸುತ್ತೇನೆ”ಎಂದಾಗ ಅವಳ ಮುದ್ದು ಮುಖ ಅರಳಿತು.
ಸಂಜೆ ಎಂದಿನಂತೆಯೇ ವಾಕಿಂಗ್ ಹೊರಟವಳು ರೂಪಾಳ ಅಮ್ಮ ಸುಧಾಳನ್ನು ಜೊತೆಗೆ ಕರೆದುಕೊಂಡು ಹೋದೆ. ಆಕೆಗೂ ತನ್ನ ಸಿಟ್ಟನ್ನು ಹೊರಹಾಕಬೇಕಾಗಿತ್ತು.”ನೋಡಿ ತಾರಾ, ಇನ್ನೂ ಕಾಲೇಜು ಮೆಟ್ಟಿಲು ಹತ್ತುವ ಮುಂಚೆಯೇ ರೂಪಾಳ ವರಸೆ ನೋಡಿ! ಟೈಟ್ ಫಿಟ್ಟಿಂಗ್ ಡ್ರೆಸ್,
ಜೀನ್ಸ್ ಟೀಶರ್ಟ್ ಬೇಕಂತೆ, ಚಪ್ಪಲಿಗೆ ಎರಡಿಂಚು ಹೀಲ್ಸ್ ಇರಬೇಕು,ಅವಳು ಕಾಲೇಜಿಗೆ ಹೋಗೋದು ಓದೋದಕ್ಕಾ, ಫ್ಯಾಷನ್ ಶೋಗಾ?”
“ಸರಿ ಬಿಡು, ಟೆನ್ಷನ್ ತಗೋಬೇಡ, ಕಾಲೇಜಿಗೆ ಹೋಗೋದು ಎಂದರೆ ಅದೇನೋ ಸಂಭ್ರಮ ಈ ಮಕ್ಕಳಿಗೆ, ಒಮ್ಮೆ ಓದಿನ ಕಡೆ ಗಮನ ಹರಿಸಿದರೆ ಎಲ್ಲಾ ಸರಿಹೋಗುತ್ತದೆ.ನಾಳೆ ಶ್ವೇತಾ ಬರ್ತಾಳೆ.ಅವಳ ಜೊತೆಗೆ ಕಳುಹಿಸು,ಅವಳು ರೂಪಾಗೆ ಬೇಕಾದ ಬಟ್ಟೆಬರೆ ಕೊಡಿಸಿಕೊಂಡು ಬರ್ತಾಳೆ”.ಸುಧಾಳಿಗೂ ಅದೇ ಸರಿ ಎನಿಸಿತು.
ಪಿಯುಸಿಯಲ್ಲಿ ಕಾಲೇಜಿಗೆ ಟಾಪರ್ ಆಗಿದ್ದ ಶ್ವೇತಾ, ಮಂಗಳೂರಿನಲ್ಲಿ ಹಾಸ್ಟೆಲಿನಲ್ಲಿದ್ದುಕೊಂಡು ಇಂಜಿನಿಯರಿಂಗ್ ಓದುತ್ತಿದ್ದಾಳೆ.ಭಾನುವಾರ ಬಂದಿಳಿದ ಶ್ವೇತಾ, ರೂಪಾಳನ್ನು ಶಾಪಿಂಗ್ ಮಾಲ್ ಗೆ ಕರೆದುಕೊಂಡು ಹೋದವಳು, ಖರೀದಿ ಮುಗಿಸಿ ಹೊಟ್ಟೆ ತುಂಬಿಸಿಕೊಂಡು ಬಂದಾಗ ಸಂಜೆಯಾಗಿತ್ತು.
ನನಗೋ ಅವರ ದೊಡ್ಡ ಬ್ಯಾಗಿನಲ್ಲಿರುವ ವಸ್ತುಗಳನ್ನು ನೋಡುವ ಕುತೂಹಲ.ರೂಪಾಳ ಮುಖ ನೋಡಿದರೆ ಖುಷಿ ಖುಷಿಯಾಗಿದ್ದಾಳೆ! ಅಯ್ಯೋ ದೇವರೇ, ಶ್ವೇತಾ ಅವಳು ಕೇಳಿದ್ದೆಲ್ಲಾ ಕೊಡಿಸಿಬಿಟ್ಟಿದ್ದಾಳೇನೋ!ಸುಧಾಳ ಕೋಪವನ್ನು ಎರಿಸುವವರ್ಯಾರು? ಏನಾದರಾಗಲಿ ಎಂದು ಕೈಸನ್ನೆಯಲ್ಲೇ ತನ್ನ ಮನೆಬಾಗಿಲಲ್ಲಿ ನಿಂತಿದ್ದ ಸುಧಾಳನ್ನು ಕರೆದೆ.
ರೂಪಾ ಒಂದೊಂದೇ ಪ್ಯಾಕೆಟ್ ಗಳನ್ನು ಬಿಚ್ಚಿದಳು. ಸುಂದರವಾದ ಚೂಡಿದಾರ್ ಸೆಟ್,ಲೆಗ್ಗಿನ್ಸ್, ಟಾಪ್ ಗಳು,ಪರ್ಸ್ ಗಳು, ಬ್ಯಾಗ್,ಚಪ್ಪಲಿಗಳು,ಎಲ್ಲವೂ ಪ್ರದರ್ಶನಕ್ಕೆ ಇಡಲ್ಪಟ್ಟವು.
ಹುಡುಗಿಯ ಮುಖ ಖುಷಿಯಿಂದ ಊರಗಲವಾಗಿತ್ತು.
ಸಂಜೆ ವಾಕಿಂಗ್ ಗೆ ನಮ್ಮ ಜೊತೆಗೆ ಶ್ವೇತಾಳೂ ಬಂದಳು.
“ನಿನ್ನೆ ನನ್ನ ಜೊತೆಗೆ ಬಂದಾಗ ಜೀನ್ಸ್ ಬೇಕು,ಹೈಹೀಲ್ ಚಪ್ಪಲಿಯೇ ಬೇಕೂಂತ ಹಟಹಿಡಿದವಳನ್ನು ಹೇಗೆ ಒಪ್ಪಿಸಿದೆಯೇ ಹುಡುಗೀ”ಆಶ್ಚರ್ಯದಿಂದ ಕೇಳಿದಳು ಸುಧಾ.
“ಹಾಗೇನಿಲ್ಲ ಆಂಟಿ, ಅವಳಿಗೆ ಜೀನ್ಸ್ ಹಾಕಿಸಿ,ಹೇಹೀಲ್ಡ್ ಶೂ ಹಾಕಿಸಿ ನಡೆಯಲು,ಕನ್ನಡಿಯಲ್ಲಿ ನೋಡಲು ಹೇಳಿದೆ.
ಟೈಟ್ ಪ್ಯಾಂಟ್ ಹಾಕಲು ಪೇಚಾಡಿದಳು.ಪಾಪ! ಹೀಲ್ಡ್ ಹಾಕಿ ಅಭ್ಯಾಸವಿಲ್ಲದೆ ನಡೆಯುವಾಗ ಕಾಲು ತಿರುಚುವಂತಾಯ್ತು. ಅವಳಿಗೇ ಮುಜುಗರವಾಗಿ ಇದೆಲ್ಲಾ ಬೇಡ ಅಂದಳು. ಸ್ವಲ್ಪ ಸಮಯ ಹೋಗಲಿ ಆಮೇಲೆ ನಿನಗೆ ಬೇಕಾದ ಡ್ರೆಸ್ ತೆಗೆದುಕೋ,ಮೊದಲು ಓದಿನ ಕಡೆ ಗಮನಕೊಡು,ಚೆನ್ನಾಗಿ ಮಾರ್ಕ್ ತೆಗೆದುಕೊಂಡರೆ ಎಲ್ಲರೂ ನಿನ್ನನ್ನು ಗುರುತಿಸುತ್ತಾರೆ, ಹಾಗೆಯೇ ಜಿಮ್ ಸೇರಿಕೊಂಡು ತೂಕ ಇಳಿಸಿಕೋ,
ದಪ್ಪಗಿದ್ದರೆ ಜೀನ್ಸ್ ಚೆನ್ನಾಗಿ ಕಾಣಿಸೋದಿಲ್ಲ ಎಂದಾಗ ನನ್ನ ಮಾತು ಒಪ್ಪಿಕೊಂಡಳು”ಎಂದಾಗ ಸುಧಾಗೂ ಸಮಾಧಾನ.
“ಅಷ್ಟು ಉದ್ದದ ಸೊಂಪಾದ ಕೂದಲು! ಕಟ್ ಮಾಡಿಸಿ ಬಾಬ್ ಕಟ್ ಮಾಡಿಕೊಳ್ಳುತ್ತೇನೆ ಅಂದಿದ್ದಳು” ಸುಧಾ ದುಃಖದಿಂದ ಹೇಳಿದಳು.”ಹೌದು ಆಂಟೀ, ನನಗೂ ಹೇಳಿದಳು,ಉದ್ದ ಕೂದಲನ್ನು ಮೈಂಟೈನ್ ಮಾಡಕ್ಕಾಗಲ್ಲ, ಚಿಕ್ಕದಾಗಿ ಬಾಬ್ ಮಾಡಿಸಿಕೊಳ್ತೀನಿ ಅಂತ.ಈಗ ಉದ್ದ ಕೂದಲೇ ಪ್ಯಾಶನ್, ಪಾರ್ಲರ್ ಗೆ ಕರೆದುಕೊಂಡು ಹೋಗುತ್ತೇನೆ.ಶೇಪ್ ಮಾಡಿಸಿಕೋ “ಎಂದು,ರಸ್ತೆಯಲ್ಲಿ ಕೂದಲು ಬಿಟ್ಟುಕೊಂಡು ನಡೆಯುತ್ತಿದ್ದ ಹುಡುಗಿಯರನ್ನು ತೋರಿಸಿದೆ.ಅಷ್ಟಕ್ಕೇ ಸುಮ್ಮನಾದಳು.
ಇನ್ನೂ ಮಗಳ ಮೇಲೆ ಮುನಿಸಿಕೊಂಡಿದ್ದ ಸುಧಾಳ ಬೆನ್ನ ಮೇಲೆ ಕೈಯಿಟ್ಟು,”ಗೆಳತೀ,ಇದನ್ನೇ ಜನರೇಷನ್ ಗ್ಯಾಪ್ ಅನ್ನುತ್ತಾರೇನೋ!ನನ್ನ ಮಗಳಿಗೂ ನನ್ನ ಮಾತು ಒಪ್ಪಿಗೆ ಆಗೋದಿಲ್ಲ.ಅವಳ ಅಕ್ಕ ಹೇಳಿದ್ದೇ ಸರಿ.ಸಮಸ್ಯೆಯನ್ನು ಜಾಣತನದಿಂದ ಪರಿಹರಿಸಿಕೊಳ್ಳಬೇಕು.”ಎಂದು ನಾನು ನುಡಿದಾಗ ಸುಮ್ಮನಿದ್ದ ಸುಧಾ ಮನೆಗೆ ಹೋದ ಮೇಲೆ ಯೋಚಿಸಿದಳು.ಮಕ್ಕಳಿಗೆ ‘ನಿನಗೇನು ಗೊತ್ತು’ ಎಂಬ ಉಢಾಫೆಯೋ?ಅಥವಾ ನಾವು ತಿಳಿಹೇಳುವ ರೀತಿಯೇ ಸರಿ ಇಲ್ಲವೇ!