ಇತ್ತೀಚಿನ ಸುದ್ದಿ
ಅಧಿವೇಶನ ಆರಂಭದ ಹಿಂದಿನ ರಾತ್ರಿ ಮೈಕ್ ಚೆಕ್ ಮಾಡಲು ಹೋದಾಗ ತೆಗೆದ ಫೋಟೋ: ವಿವಾದ ಕುರಿತು ಸ್ಪೀಕರ್ ಖಾದರ್ ಮಂಗಳೂರಿನಲ್ಲಿ ಸ್ಪಷ್ಟನೆ
29/07/2024, 13:36
ಮಂಗಳೂರು(reporterkarnataka.com): ವಿಧಾನಸೌಧಕ್ಕೆ ಅತಿಥಿಗಳು, ವಿದ್ಯಾರ್ಥಿಗಳು ಬಂದಾಗಲೆಲ್ಲ ಅಲ್ಲೇ ಫೋಟೋ ತೆಗೀತ್ತೀವಿ. ಇದರಲ್ಲಿ ತಪ್ಪು ಹುಡುಕೋ ಪ್ರಯತ್ನ ಬೇಡ, ಫೋಟೋ ತೆಗೀಬಾರದು ಅಂತ ಏನೂ ಇಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಸ್ಪೀಕರ್ ಪೀಠದ ಎದುರು ಕಾಂಗ್ರೆಸ್ ನಾಯಕರ ಜೊತೆ ಖಾದರ್ ಫೋಟೋ ವೈರಲ್ ಆದ ವಿಚಾರದ ಬಗ್ಗೆ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಅಧಿವೇಶನ ನಡೆಯುವಾಗ ತೆಗೆದ ಫೋಟೋ ಅಲ್ಲ. ಅಧಿವೇಶನ ನಡೆಯುವ ಮೊದಲು ರಾತ್ರಿ ತೆಗೆದ ಫೋಟೋ ಅದು. ನಾನು ಅಧಿವೇಶನದ ಮೊದಲು ಮೈಕ್ ಚೆಕ್ ಮಾಡಲು ರಾತ್ರಿ ಹೋಗಿದ್ದೆ. ಆಗ ಮಂಗಳೂರಿನ ಮಾಜಿ ಮೇಯರ್ ಒಬ್ಬರು ತೆಗೆದ ಫೋಟೋ ಅದು ಎಂದು ಖಾದರ್ ಹೇಳಿದರು.
ಶಿರೂರು ಘಟನೆ ಬಗ್ಗೆ ಎಲ್ಲರಿಗೂ ಬಹಳಷ್ಟು ಬೇಸರ ಇದೆ. ಕೇರಳದ ಶಾಸಕರು, ಎಂಪಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ. ಆದಷ್ಟು ಬೇಗ ಮೃತದೇಹ ಸಿಗಲಿ, ಗೌರವಯುತ ಅಂತ್ಯ ಸಂಸ್ಕಾರ ಅಗಲಿ ಎಂದು ಅವರು ನುಡಿದರು.
ವಿಧಾನಸಭೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. 9 ದಿನಗಳಲ್ಲಿ 8 ದಿವಸ ಅಧಿವೇಶನ ನಡೆದಿದೆ. ರಾಜ್ಯದಲ್ಲಿ ಮಳೆ, ನೆರೆ, ಪ್ರವಾಹ ಸೇರಿ ಅನೇಕ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಶೂನ್ಯ ವೇಳೆ ಸೇರಿ ಹಲವು ಅವಧಿಗಳಲ್ಲಿ ಚರ್ಚೆಗಳು ಆಗಿವೆ. ಆದರೆ ಹೆಚ್ಚಿನ ಚರ್ಚೆ ಆಗಿಲ್ಲ ಅನ್ನೋ ವಿಷಾದ ನನಗಿದೆ. ಮೂರು ತಿಂಗಳಿಗೊಮ್ಮೆ ಅಧಿವೇಶನ ಆಗೋವಾಗ ಜನರ ಸಮಸ್ಯೆಗೆ ಮಹತ್ವ ಕೊಡಬೇಕು. ಜನರ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು. ಬೇರೆ ವಿಷಯ ಯಾವಾಗಲೂ ಮಾತನಾಡಬಹುದು ಎಂದು ಸ್ಪೀಕರ್ ನುಡಿದರು.
ತುಳು ಭಾಷೆ ಪ್ರಸ್ತಾಪವಾದ ಬಗ್ಗೆ ಮಾತನಾಡಿದ ಅವರು, ಒಂದು ಭಾಷೆಯ ಮಹತ್ವ, ಇತಿಹಾಸ, ಸಂಸ್ಕೃತಿ, ಪರಂಪರೆ ರಾಜ್ಯದ ಜನರಿಗೆ ಪರಿಚಯ ಆಗಬೇಕು. ಅಧಿವೇಶನದಲ್ಲಿ ಇದನ್ನು ಯಾರೂ ಅಪಹಾಸ್ಯ ಮಾಡಿಲ್ಲ, ಆದರೆ ಸಣ್ಣ ಸಣ್ಣ ಮಾತು ಬರುತ್ತೆ. ತುಳು ಅಕಾಡೆಮಿ ಈ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡಬೇಕು ಎಂದು ಅವರು ನುಡಿದರು.