ಇತ್ತೀಚಿನ ಸುದ್ದಿ
ಪ್ರವಾಹ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಜಲದಿಗ್ಬಂಧನ
19/07/2024, 21:05
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕೇರಳದ ವಯನಾಡು ಹಾಗೂ ಕಪಿಲಾ ನದಿ ಪ್ರಾಂತ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕಬಿನಿ ಜಲಾಶಯದಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ಈ ಹಿನ್ನೆಲೆ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿಯ ಪ್ರವಾಹ ದೇವಾಲಯದ ಸಮೀಪದವರೆಗೂ ಹರಿದು ಬಂದಿದೆ.
ದೇವಾಲಯದ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ನುಗ್ಗಿರುವ ನೀರು ಒಂದು ರೀತಿ ಜಲ ದಿಗ್ಬಂಧನ ಹಾಕಿದಂತಿದೆ.
ಪ್ರವಾಹದಿಂದಾಗಿ ಐತಿಹಾಸಿಕ ಹಳೆ ಸೇತುವೆ, ಹದಿನಾರುಕಾಲು ಮಂಟಪ, ಪರಶುರಾಮ ದೇವಾಲಯ, ಅಯ್ಯಪ್ಪ ಸ್ವಾಮಿ, ದೇವಾಲಯ ಸುಕ್ಷೇತ್ರ ಶ್ರೀ ಮಲ್ಲನ ಮೂಲೆ ಮಠ, ಲಿಂಗಾಭಟರ ಗುಡಿ, ಚಾಮುಂಡೇಶ್ವರಿ ದೇವಾಲಯ, ಸೇರಿದಂತೆ ಪಟ್ಟಣದ ಹಳ್ಳದ ಕೇರಿ, ತೋಪಿನ ಬೀದಿಗಳಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿವೆ. ಇದರಿಂದ ಎಚ್ಚೆತ್ತ ಜಿಲ್ಲಾ ಮತ್ತು ತಾಲೂಕ ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡು ತಗ್ಗು ಪ್ರದೇಶದ ಹಾಗೂ ಮುಳುಗಡೆಯಾದ ಮನೆಗಳ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆದು ಆಶ್ರಯ ನೀಡಲಾಗಿದೆ.
ನಂಜನಗೂಡಿನ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಶಾಸಕ ಹರ್ಷವರ್ಧನ್ ಹಾಗೂ ತಹಶೀಲ್ದಾರ್ ಶಿವಕುಮಾರ್ ಕಾಸನೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆಯು ಹೀಗೆ ಮುಂದುವರೆದರೆ ಇನ್ನೂ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ.