ಇತ್ತೀಚಿನ ಸುದ್ದಿ
ಪುಡಾ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ: ಕಾರಣ ಏನು ಗೊತ್ತೇ?
13/07/2024, 19:07
ಪುತ್ತೂರು(reporterkarnataka.com): ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ(ಪುಡಾ)ಅಧ್ಯಕ್ಷ ಸ್ಥಾನಕ್ಕೆ ಕೆ.ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಶಾಸಕ ಅಶೋಕ್ ರೈ ಮಾತಿನಿಂದ ನೊಂದು ಕೋಡಿಂಬಾಳ ಅವರು ಪುಡಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ನಾಯಕನ ಈ ರಾಜೀನಾಮೆ ನಿರ್ಧಾರ ಪುತ್ತೂರು ರಾಜಕೀಯ ವಲಯದಲ್ಲಿ ಸಣ್ಣ ಮಟ್ಟಿನ ಕಂಪನ ಉಂಟು ಮಾಡಿದೆ.
ಪುತ್ತೂರು ಶಾಸಕ ಅಶೋಕ್ ರೈ ಅವರು ಜೂ.11ರಂದು ಬೆಂಗಳೂರಿನಿಂದ ಕರೆ ಮಾಡಿ, ಪುಡಾ ಸತ್ತಿದೆ. ನಿಮ್ಮ ಕಾರ್ಯವೈಖರಿ ಬಗ್ಗೆ ಜನ ಮಾತನಾಡಲು ಶುರು ಮಾಡುತ್ತಾರೆ ಎಂದು ಹೇಳಿದರು. ನಾನು ಪುಡಾ ಅಧ್ಯಕ್ಷನಾಗಿ ಪದಗ್ರಹಣ ಮಾಡಿದಾಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಅದು ಜೂ.6 ರವರೆಗೆ ಇತ್ತು. ಬಳಿಕ ಸಿಕ್ಕ 22 ದಿನದಲ್ಲಿ ಕಟ್ ಕನ್ವರ್ಷನ್ ಹಾಗೂ ಶ್ರೀ ಮಹಾಲಿಂಗೇಶ್ವರ ದೇಗುಲದ ಬಿಲ್ ಮಂಜೂರು ಮಾಡುವ ಕಾರ್ಯವನ್ನು ಮಾಡಿದ್ದೇನೆ. ನನ್ನನ್ನು ಯಾವುದೇ ಶಿಫಾರಸು ಇಲ್ಲದೇ ಶಾಸಕರು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ನೀಡುವುದು ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಭಾಸ್ಕರ ಕೋಡಿಂಬಾಳ ತಿಳಿಸಿದ್ದಾರೆ.