ಇತ್ತೀಚಿನ ಸುದ್ದಿ
ಬಿಜೈ ಸಮೀಪ ಮನೆ ದರೋಡೆ: ಮನೆಮಂದಿಯ ಕಟ್ಟಿ ಹಾಕಿ ಹಲ್ಲೆ; ಚಡ್ಡಿ ಗ್ಯಾಂಗ್ ಕೃತ್ಯ?
09/07/2024, 12:28

ಮಂಗಳೂರು(reporterkarnataka.com):ಉರ್ವ ಬಳಿ ಮನೆಯ ಕಿಟಕಿ ಗ್ರಿಲ್ ಕತ್ತರಿಸಿ ಮನೆ ದರೋಡೆಗೆ ವಿಫಲ ಯತ್ನ ನಡೆಸಿದ ಬೆನ್ನಲ್ಲೇ
ನಗರದಲ್ಲಿ ಮತ್ತೆ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬಿಜೈ ಕಾಪಿಕಾಡ್ ಬಳಿಯ ದಡ್ಡಲ್ ಕಾಡು ಕೋಟೆಕಣಿ ಸಮೀಪ ಇಂದು
ಮುಂಜಾನೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಇಬ್ಬರನ್ನು ಕಟ್ಟಿಹಾಕಿ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ನಡೆದಿದೆ.
ಚಡ್ಡಿ ಗ್ಯಾಂಗ್ ತಂಡ ಉರ್ವದಲ್ಲಿ ಮನೆ ದರೋಡೆಗೆ ಯತ್ನಿಸಿತ್ತು. ಸುಮಾರು 5 ಮಂದಿ ಇದ್ದ ತಂಡ ಕಳ್ಳತನಕ್ಕೆ ಯತ್ನಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಬಿಜೈ ಪ್ರಕರಣದಲ್ಲಿ ದರೋಡೆಕೋರರು ಕಾರಿನಲ್ಲಿ ಆಗಮಿಸಿದ್ದು, ಹೆಜಮಾಡಿ ಟೋಲ್ ಗೇಟ್ ಸಮೀಪ ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ. ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಶೋಧ ನಡೆಸುತ್ತಿದ್ದಾರೆ. ಇದು ಕೂಡ ಚಡ್ಡಿ ಗ್ಯಾಂಗ್ ಕೃತ್ಯ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.