ಇತ್ತೀಚಿನ ಸುದ್ದಿ
ಬಾಬಾ ರಾಮ್ ದೇವ್ ಪತಂಜಲಿ ಫುಡ್ಸ್ ನಿಂದ ಪಲ್ಗುಣಿ ನದಿಗೆ ಅಪಾಯಕಾರಿ ತ್ಯಾಜ್ಯ: ಕಣ್ಣಿಗೆ ರಾಚುವಂತೆ ಕಂಡರೂ ಕಣ್ಮುಚ್ಚಿ ಕುಳಿತ ಮಾಲಿನ್ಯ ನಿಯಂತ್ರಣ ಮಂಡಳಿ
21/06/2024, 19:12
ಮಂಗಳೂರು(reporterkarnataka.com): ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ರ ಪತಂಜಲಿ ಫುಡ್ಸ್ (ರುಚಿಗೋಲ್ಡ್ ) ಕಡೆಯಿಂದ ಪಲ್ಗುಣಿ ನದಿಗೆ ನೇರವಾಗಿ ಅಪಾಯಕಾರಿ ಕೈಗಾರಿಕಾ ತ್ಯಾಜ್ಯ ವಾರದಿಂದ ಹರಿದು ಬರುತ್ತಿದೆ. ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಿದ್ದರೂ ಈವರಗೆ ಪರಿಶೀಲನೆಗೆ ಯಾರೊಬ್ಬರೂ ಈ ಕಡೆಗೆ ತಲೆ ಹಾಕಿಲ್ಲ ಎಂದು ನಾಗರಿಕ ಹೋರಾಟ ಸಮಿತಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈಗ ನಾವು (ನಾಗರಿಕ ಹೋರಾಟ ಸಮಿತಿ) ಸ್ಥಳ ಪರಿಶೀಲನೆ ನಡೆಸಿ, ಪತಂಜಲಿ ಫುಡ್ಸ್ ಆವರಣದ ಒಳಗಡೆಗೂ ಹೋಗಿ ಪರಿಶೀಲಿಸಿದೆವು. ಕಂಪೆನಿ ಅಧಿಕಾರಿಗಳು ದಾರಿ ತಪ್ಪಿಸಲು ನೋಡಿದರೂ, ಕಂಪೆನಿಯ ಒಳಗಡೆಯೇ ತೋಕೂರು ಹಳ್ಳಕ್ಕೆ ಸಂಪರ್ಕದ ಭಾಗದಲ್ಲಿ ಮಾರಕ ಕೈಗಾರಿಕಾ ತ್ಯಾಜ್ಯ ತೆರೆದ ಭಾಗದಲ್ಲಿ ಹರಿಯುತ್ತಿರುವುದು ಕಂಡು ಬಂತು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ವರ್ಷದ ಹಿಂದೆಯೂ ನೇರವಾಗಿ ಬಾಬಾ ರಾಮದೇವ್ ರ ರುಚಿಗೋಲ್ಡ್ ಘಟಕ ಕೈಗಾರಿಕಾ ತ್ಯಾಜ್ಯ ಫಲ್ಗುಣಿ ನದಿಗೆ ಹರಿಯ ಬಿಟ್ಟು ಹೋರಾಟ ಸಮಿತಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿತ್ತು. ಆಗ ಹೊಸ ಶುದ್ದೀಕರಣ ಘಟಕ ಮೂರು ತಿಂಗಳಲ್ಲಿ ಸಿದ್ದಪಡಿಸುವುದು, ತ್ಯಾಜ್ಯ ನೀರು ಸಂಸ್ಕರಿಸಿ 100% ಮರುಬಳಕೆ, 0% ನೀರು ಹೊರ ಹರಿವು ಸ್ಥಿತಿ ನಿರ್ಮಿಸುವುದಾಗಿ ಕಂಪೆನಿ ಮಾತು ಕೊಟ್ಟು ಬಚಾವಾಗಿತ್ತು. ಇಲ್ಲಿಯವರೆಗೂ ತ್ಯಾಜ್ಯ ಶುದ್ದೀಕರಣ ಘಟಕ ನಿರ್ಮಾಣ ಪೂರ್ಣಗೊಂಡಿಲ್ಲ.
ಕಳೆದ ಒಂದು ವರ್ಷದಿಂದ ಎಂಆರ್ ಪಿಎಲ್ ಸಹಿತ ಹಲವು ಕಂಪೆನಿಗಳು ತೋಕೂರು ಹಳ್ಳದ ಮೂಲಕ ಫಲ್ಗುಣಿ ನದಿಗೆ ವಿಷಕಾರಿ ಕೈಗಾರಿಕಾ ತ್ಯಾಜ್ಯ ಹರಿಸುವ ಕುರಿತು ಹಲವು ದೂರುಗಳನ್ನು ಆಧಾರ ಸಹಿತ ನೀಡಲಾಗಿತ್ತು. ಕಣ್ಣಿಗೆ ಹೊಡೆಯುವಂತೆ ಕಾಣುವ ಮಾಲಿನ್ಯ ಯುಕ್ತ ನೀರನ್ನು ಪರೀಕ್ಷೆಗಾಗಿ ಬಾಟಲ್ ಗಳಲ್ಲಿ ತುಂಬಿಸಿ ತೆಗೆದುಕೊಂಡು ಹೋಗುವ ಮಾಲಿನ್ಯ ನಿಯಂತ್ರಣ ಮಂಡಳಿಯು ನಂತರ ವರದಿಯಲ್ಲಿ “ಕೈಗಾರಿಕಾ ತ್ಯಾಜ್ಯದ ಅಂಶ” ಗಳು ಇಲ್ಲ ಅಂತ ಕಾಣಿಸುವುದು ಮಾತ್ರ ಚೋದ್ಯ. ಸುಪ್ರೀಂ ಕೋರ್ಟ್ ಹಸಿರು ಪೀಠ ಹಲವು ಸು ಮಟೊ ಕೇಸು ದಾಖಲಿಸಿದ್ದರೂ ಇಲ್ಲಿನ ದಪ್ಪ ಚರ್ಮದ ಅಧಕಾರಿ ವರ್ಗಕ್ಕೆ ತಾಗುವುದೆ ಇಲ್ಲ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.