ಇತ್ತೀಚಿನ ಸುದ್ದಿ
ಬಿಜೆಪಿ ನಾಯಕ ಭಾನುಪ್ರಕಾಶ್ ಹೃದಯಾಘಾತಕ್ಕೆ ಬಲಿ: ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಂತಿರುಗುವ ವೇಳೆ ದುರ್ಘಟನೆ
17/06/2024, 18:21
ಶಿವಮೊಗ್ಗ(reporterkarnataka.com): ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರುದ್ಧ ಬಿಜೆಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನಾ ಭಾಷಣ ಮಾಡಿದ ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಅವರು ಕೆಲವೇ ನಿಮಿಷಗಳಲ್ಲಿ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗದ ಗೋಪಿ ಸರ್ಕಲ್ ಬಳಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು.
ರಾಜ್ಯ ಸರಕಾರವನ್ನು ಅಣಕಿಸಲು ಸಾವಿನ ಚಟ್ಟವನ್ನು ಪ್ರತಿಭನೆಯ ವೇಳೆ ಅಣಕು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾನುಪ್ರಕಾಶ್ ಅವರು ಭಾಷಣ ಮಾಡಿದ್ದರು.
ಪ್ರತಿಭಟನೆ ಮುಗಿಸಿ ಹಿಂತಿರುಗಲು ಕಾರಿನಲ್ಲಿ ಕುಳಿತ್ತಿದ್ದ ವೇಳೆ ಭಾನುಪ್ರಕಾಶ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಸಮೀಪದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುಪ್ರಕಾಶ್ ಅವರು ಕೊನೆಯುಸಿರೆಳೆದರು.