ಇತ್ತೀಚಿನ ಸುದ್ದಿ
ಶಿರಾಡಿ ಘಾಟಿಯಲ್ಲಿ ಭೀಕರ ರಸ್ತೆ ಅಪಘಾತ: ಇನ್ನೋವಾ ಕಾರು- ಕಂಟೈನರ್ ಲಾರಿ ಡಿಕ್ಕಿ; ಬೊಂಡಾಲದ ತಾಯಿ- ಮಗ ಸ್ಥಳದಲ್ಲೇ ಸಾವು
21/05/2024, 11:33

ಪ್ರಜ್ವಲ್ ಗೌಡ ನೆಕ್ಕಿಲಾಡಿ ಉಪ್ಪಿನಂಗಡಿ
info.eporterkarnataka@gmail.com
ಶಿರಾಡಿ ಘಾಟಿಯಲ್ಲಿ ಇಂದು ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ- ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಇನ್ನೋವಾ ಕಾರು ಹಾಗೂ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಮೃತಪಟ್ಟವರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲದ ಮೊಹಮ್ಮದ್ ಶಫೀಕ್(20) ಹಾಗೂ ಅವರ ತಾಯಿ ಸಫಿಯಾ(50) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇತರರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸಂಬಂಧಿಕರೋರ್ವರ ಮದುವೆ ಔತಣಕೂಟ ಮುಗಿಸಿ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದಾಗ ಶಿರಾಡಿ ಘಾಟಿಯ ಕೆಂಪುಹೊಳೆ ಸಮೀಪ ಈ ದುರಂತ ಸಂಭವಿಸಿದೆ. ಮೃತಪಟ್ಟಿರುವ ಶಫೀಕ್ ಕಾರು ಚಲಾಯಿಸುತ್ತಿದ್ದರು. ಶಫೀಕ್ ಮಂಗಳೂರಿನ ಕೊಣಾಜೆಯ ಪಿ ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಮೂವರು ಮಕ್ಕಳು ಕೂಡಾ ಇದ್ದು, ಅವರಿಗೂ ಕೂಡ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.