ಇತ್ತೀಚಿನ ಸುದ್ದಿ
ಪಾಣೆಮಂಗಳೂರು: ಆಟೋ- ಬೈಕ್ ಡಿಕ್ಕಿ; ರಸ್ತೆಗೆ ಎಸೆಯಲ್ಪಟ್ಟ ರಿಕ್ಷಾ ಪ್ರಯಾಣಿಕ ಸಾವು
20/05/2024, 22:21

ಬಂಟ್ವಾಳ(reporterkarnataka.com): ಆಟೋರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕ ಯುವಕನೊಬ್ಬ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಪಾಣೆಮಂಗಳೂರಿನಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಸಜಿಪ ಕಂಚಿನಡ್ಕ ಪದವು ನಿವಾಸಿ ಅಲ್ತಾಫ್ (20) ಎಂದು ಗುರುತಿಸಲಾಗಿದೆ.
ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಪೇಟೆಯಾಗಿ ತೆರಳುತ್ತಿದ್ದ ಆಟೋರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾದಲ್ಲಿ ಅಲ್ತಾಫ್ ರಸ್ತೆಗೆ ಎಸೆಯಲ್ಪಟ್ಟು ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು.
ತಕ್ಷಣ ಸ್ಥಳೀಯರು ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.